ಜನರಿಗಾಗಿ ಪುರಸಭೆ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಳ್ಳಲಿ

KannadaprabhaNewsNetwork | Updated : Oct 28 2023, 01:16 AM IST

ಸಾರಾಂಶ

ಹಳೇಯ ತಾಲೂಕು ಕಚೇರಿ ಆವರಣದಲ್ಲಿ ನೂತನ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಸರ್ವಾನುಮತದಿಂದ ಒಪ್ಪಿಗೆ

- ಹಳೇಯ ತಾಲೂಕು ಕಚೇರಿ ಆವರಣದಲ್ಲಿ ನೂತನ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಸರ್ವಾನುಮತದಿಂದ ಒಪ್ಪಿಗೆ

- ಇಂದಿರಾ ಕ್ಯಾಟೀನ್ ನಿರ್ಮಾಣವನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಬೇಕೆಂದು ಸಭೆಯಲ್ಲಿ ನಿರ್ಣಯ

- - - ಕನ್ನಡಪ್ರಭ ವಾರ್ತೆ ಸೊರಬ

ಪುರಸಭೆ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಬೇಸರವಿದೆ. ಆದ್ದರಿಂದ ಸಾರ್ವಜನಿಕ ಸೇವೆಗಾಗಿಯೇ ಇರುವ ಸರ್ಕಾರಿ ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಬೇಕು. ಆಡಳಿತ ಸುಧಾರಣೆಗೆ ಉಪವಿಭಾಗಾಧಿಕಾರಿ ಅವರು ಕ್ರಮ ವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪುರಸಭೆ ಮಾಸಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಕುಂದು- ಕೊರತೆಗಳು ಮತ್ತು ಕಡತಗಳನ್ನು ಅವಧಿಗೆ ಸರಿಯಾಗಿ ವಿಲೇವಾರಿ ಮಾಡದೇ ಬೇಜವಾಬ್ದಾರಿತನದಿಂದ ವರ್ತಿಸುವುದು ಸರಿಯಲ್ಲ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸದಿದ್ದರೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.

ಪಟ್ಟಣದ ಸರ್ವೆ ನಂ. 113ರಲ್ಲಿ 1 ಎಕರೆ ಜಾಗದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸುವ ಉದ್ಧೇಶ ಹೊಂದಲಾಗಿದೆ. ಅಲ್ಲದೇ, ಖಾಸಗಿ ಬಸ್ ನಿಲ್ದಾಣದಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮತ್ತು ಅಬಕಾರಿ ಇಲಾಖೆ ಕಚೇರಿ ಕಿಷ್ಕಿಂದೆಯಂತಿದೆ. ಜನಸಂದಣಿ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಕೈಗೆತ್ತಿಕೊಳ್ಳುವಾಗ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸಬೇಕು ಎಂದರು.

ನಿವೇಶನ ಖಾತೆ, ಇ-ಸ್ವತ್ತು ಸೇರಿದಂತೆ ಸಾರ್ವಜನಿಕರಿಗೆ ಅವಶ್ಯವಿರುವ ಹಕ್ಕು ದಾಖಲೆಗಳನ್ನು ಪಡೆಯಲು ಅಲೆದಾಡುವ ಬಗ್ಗೆ ಜನರಿಂದ ದೂರು ಕೇಳಿಬರುತ್ತಿವೆ. ಅಧಿಕಾರಿಗಳು ಕರ್ತವ್ಯನಿಷ್ಠೆ ಜೊತೆಗೆ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಅವರ ಕೆಲಸ, ಕಾರ್ಯಗಳಿಗೆ ತೊಂದರೆಯಾಗದಂತೆ ಜನಸ್ನೇಹಿ ಆಡಳಿತ ನೀಡಲು ಮುಂದಾಗುವಂತೆ ತಿಳಿಸಿದರು.

ಪಟ್ಟಣದ ಸರ್ವೆ. ನಂ. 113ರಲ್ಲಿ ವಾಸವಾಗಿರುವ ನಿವಾಸಿಗಳಿಗೆ ತಾವು ಶಾಸಕರಾಗಿದ್ದ ಅವಧಿಯಲ್ಲಿ 700ಕ್ಕೂ ಅಧಿಕ ಜನರಿಗೆ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಈ ಹಿಂದೆ ರಾಜಕೀಯ ಉದ್ದೇಶಕ್ಕಾಗಿ ವಜಾಗೊಳಿಸುವ ಪ್ರಯತ್ನ ಮಾಡಲಾಗಿದೆ. ಪುನಃ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಖಾತೆ ಮಾಡಿಕೊಡುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮೀಪದ ತೆರವುಗೊಳಿಸಲಾದ ಹಳೇಯ ತಾಲೂಕು ಕಚೇರಿ ಆವರಣದಲ್ಲಿ ನೂತನ ಪುರಸಭೆ ಕಟ್ಟಡ ನಿರ್ಮಾಣ ಮಾಡುವಂತೆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು. ಇಂದಿರಾ ಕ್ಯಾಟೀನ್ ನಿರ್ಮಾಣವನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಬೇಕೆಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಹುಸೇನ್ ಸರಕಾವಸ್, ಜಿಲ್ಲಾ ನಗರೋತ್ಥಾನ ಯೋಜನಾಧಿಕಾರಿ ಮನೋಹರ, ಇಒ ಪ್ರದೀಪಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ, ಲೋಕೋಪಯೋಗಿ ಎಂಜಿನಿಯರ್ ಚಂದ್ರಪ್ಪ, ಮೆಸ್ಕಾಂ ಎಂಜಿನಿಯರ್ ಸತ್ಯಪ್ರಕಾಶ್, ಗಣಪತಿ ನಾಯಕ್, ಹರೀಶ್, ಕಿರಣಕುಮಾರ್, ನಾಗರಾಜ್, ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಈರೇಶ್ ಮೇಸ್ತ್ರಿ, ಮಧುರಾಯ್ ಜಿ. ಶೇಟ್, ಪ್ರಸನ್ನಕುಮಾರ್ ದೊಡ್ಮನೆ, ಅನ್ಸರ್ ಅಹ್ಮದ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

- - -

-27ಕೆಪಿಸೊರಬ01:

ಸೊರಬ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆ ನಡೆಯಿತು.

Share this article