ಬೀದಿ ದೀಪ ನಿರ್ವಹಣೆಗೆ ಪುರಸಭೆ ಮುಂದಾಗಲಿ

KannadaprabhaNewsNetwork |  
Published : May 23, 2024, 01:06 AM IST
ಗಜೇಂದ್ರಗಡ ೬ನೇ ವಾರ್ಡಿನ ಬೀದಿ ದೀಪ ದುರಸ್ಥಿಯಲ್ಲಿರುವುದು. | Kannada Prabha

ಸಾರಾಂಶ

ಪುರಸಭೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಲವು ಬಾರಿ ತಿಳಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ

ಗಜೇಂದ್ರಗಡ: ಪಟ್ಟಣದ ೫ ಮತ್ತು ೬ನೇ ಬಡಾವಣೆಯಲ್ಲಿನ ಬೀದಿ ದೀಪದ ಕಂಬ ಇದ್ದು ಇಲ್ಲದಂತಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಬೀದಿ ದೀಪ ನಿರ್ವಹಣೆಯ ಕೊರತೆಯಿಂದ ಬಡಾವಣೆಯ ಜನತೆ ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟಸಾಧ್ಯವಾಗಿದ್ದು, ಪಟ್ಟಣದ ಪ್ರಮುಖ ರಸ್ತೆಯು ಕತ್ತಲಲ್ಲಿ ಮುಳುಗಿದ ಪರಿಣಾಮ ಪುರಸಭೆ ಹಾಗೂ ಗುತ್ತಿಗೆದಾರರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಟ್ಟಣದಲ್ಲಿ ಚುನಾವಣೆ ನೀತಿ ಸಂಹಿತೆಯ ನೆಪವೇ ಪ್ರಧಾನವಾಗಿರುವ ಪರಿಣಾಮ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದನೆ ಸಿಗುವುದು ಗಗನಕುಸುಮ ಎನ್ನುವಂತಾಗಿದೆ. ಹೀಗಾಗಿ ಇಲ್ಲಿನ ಕೆಲ ಬಡಾವಣೆಗಳ ರಸ್ತೆಯಲ್ಲಿ ರಾತ್ರಿ ಸಾರ್ವಜನಿಕರಿಗೆ ಓಡಾಡುವುದೇ ಬಲುದೊಡ್ಡ ಸವಾಲಾಗಿದೆ. ಬೀದಿ ದೀಪ ಉರಿಯದ ಕಾರಣ ೫ ಮತ್ತು ೬ನೇ ವಾರ್ಡಿನ ನಾಗರಿಕರು ಅದರಲ್ಲೂ ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದು, ಕತ್ತಲೆಯಲ್ಲಿ ಓಡಾಟ ದುಸ್ತರವಾಗಿದೆ. ಅಲ್ಲದೇ ಹಲವು ಅಪಾಯ ಸೂಚಿಸುವ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಬೀದಿ ದೀಪಗಳು ಉರಿಯದ ಕಾರಣ ಕಳ್ಳಕಾಕರಿಗೆ ಕಳವು ಮಾಡಲು ಪೂರಕ ವಾತಾವರಣ ನಿರ್ಮಿಸಿದಂತಾಗಿದ್ದು, ಈ ಕುರಿತು ಸಂಬಂಧಿಸಿದ ಪುರಸಭೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಲವು ಬಾರಿ ತಿಳಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾರ್ಡಿನ ನಿವಾಸಿಗಳು ದೂರಿದ್ದಾರೆ.

ಬೀದಿದೀಪ ಉರಿಯದ ಕಾರಣ ಈಗಾಗಲೇ ಪುರಸಭೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಬೀದಿ ದೀಪದ ಸಮಸ್ಯೆಗೆ ಪರಿಹಾರವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗೆ ಪರಿಹಾರ ಸಿಗದಂತಾಗಿದ್ದು, ಬೀದಿ ದೀಪ ಸಮಸ್ಯೆಗೆ ಪರಿಹರಿಸದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಸಮಸ್ಯೆ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಂಡು ೫ ಮತ್ತು ೬ನೇ ವಾರ್ಡದಲ್ಲಿನ ಬೀದಿ ದೀಪಗಳ ನಿರ್ವಹಣೆಗೆ ಮುಂದಾಗಬೇಕು ಎಂದು ನಿವಾಸಿಗಳಾದ ಮುದಿಯಪ್ಪ ಕಮ್ಮಾರ, ಸತೀಶ ಕೋಟ್ನಿಸ್, ಸಿದ್ದನಗೌಡ ಪಾಟೀಲ, ಈಶಪ್ಪ ಕಮ್ಮಾರ, ಬಾಬು ಗಾಯಕವಾಡ, ರಘು ತಾಸಿನ, ಚಂದ್ರು ಹೂಗಾರ, ಹನುಮಂತ ಹಾಲಕೇರಿ ಸೇರಿ ಇತರರು ಒತ್ತಾಯಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ