ಜೋಯಿಡಾ: ಆಧುನಿಕ ತಾಂತ್ರಿಕತೆಯಿಂದ ಮುಂದಿನ ಜನಾಂಗಕ್ಕೆ ಆಗುವ ಹಾನಿಯ ಬಗ್ಗೆ ಅರಿವಿರಬೇಕು ಎಂದು ಸಾಹಿತಿ ವ್ಯಾಸ ದೇಶಪಾಂಡೆ ಹೇಳಿದರು.
ತಾಲೂಕಿನ ನಂದಿಗದ್ದೆಯಲ್ಲಿ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೃತಕ ಬುದ್ಧಿಮತ್ತೆ ಬೆಳೆಯುತ್ತಾ ಹೋದರೆ ಜನರ ಭವಿಷ್ಯದ ಗತಿ ಏನಾಗಬಹುದು? ಕೆಲಸ ಇಲ್ಲದೇ ಹೋದರೆ ಜನರು ಮುಂದೆ ಬದುಕುವುದಾದರೂ ಹೇಗೆ? ಟೆಕ್ನಾಲಜಿ ಎಂಬ ಮಾಯಾ ಪ್ರಪಂಚ ಮನುಷ್ಯನನ್ನು ಪಕ್ಕಕ್ಕೆ ತಳ್ಳಿ ಮನುಷ್ಯ ಮಾಡುವ ಕೆಲಸ ತಾನು ಮಾಡುವ ಸಂಸ್ಕೃತಿ ಬೇಕೇ? ಎಲ್ಲ ರಂಗದಲ್ಲೂ ಈ ತಾಂತ್ರಿಕತೆ ಹೆಚ್ಚಾಗಿ ಮರುಳು ಮಾಡುವ ಕೆಲ ಅವಿಷ್ಕಾರಗಳಿಂದ ಮುಂದಿನ ತಲೆಮಾರಿನ ಜನತೆ ಬಹುದೊಡ್ಡ ಸಮಸ್ಯೆಗೆ ಸಿಲುಕುವ ಆತಂಕ ಕಾಡುತ್ತಿದೆ. ಹೀಗಾಗಿ ಮಕ್ಕಳಿಗೆ ನಾವು ಈ ಸಮಸ್ಯೆ ಎದುರಿಸುವ ಶಕ್ತಿ ತುಂಬಬೇಕಾಗಿದೆ ಎಂದರು.
ಇಲ್ಲಿಯ ಜನ ಈ ನೆಲ ಬಿಟ್ಟು ಹೋದರೆ ನಾನು ಬೆಳೆಯುತ್ತೇನೆ ಎನ್ನುವ ಕಲ್ಪನೆ ತಪ್ಪು. ಇಲ್ಲಿನ ಸಿಹಿ ನೀರಿನೊಂದಿಗೆ ಬದುಕು ಕಟ್ಟಿಕೊಳ್ಳಿ. ನಮ್ಮತನ, ಕನ್ನಡತನ ಉಳಿಸಿಕೊಂಡು ಬೆಳೆಯಿರಿ ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳಾಡಿ, ನನ್ನ ಕನ್ನಡ ನುಡಿಯೇ ನೀನೆಷ್ಟು ಚಂದ, ಏನು ಗೀಚಿದರೂ ಆಗುವುದು ಶ್ರೀಗಂಧ ಎಂದು ದಿನಕರ ದೇಸಾಯಿ ಅವರನ್ನು ಸ್ಮರಿಸಿದರು.
ನಂದಿಗದ್ದೆ ಗ್ರಾಪಂ ಅಧ್ಯಕ್ಷ ಅರುಣ ದೇಸಾಯಿ ಕಾರ್ಯಕ್ರಮದ ಕುರಿತು ಮಾತನಾಡಿ, ಯಾವುದೇ ಸಾಹಿತಿ, ಕವಿ ನಾನಲ್ಲ. ಆದರೆ ಕನ್ನಡ ಅಭಿಮಾನಿ ನಾನು. ಹಾಗಾಗಿ ನಮಗೊಂದು ಅವಕಾಶ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ಗೆ ಆಭಾರಿಯಾಗಿರುವೆ ಎಂದರು.ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ, ಇಒ ಎನ್.ಭಾರತಿ, ಸಹಕಾರಿ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ದಾನಗೇರಿ, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಅಂತೋನಿ ಜಾನ್, ಹಿಂದಿನ ಸರ್ವಾಧ್ಯಕ್ಷ ಭೀಮಾ ಶಂಕರ, ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿದರು.
ಈ ಮಧ್ಯೆ ಸರ್ವಾಧ್ಯಕ್ಷೆ ಸುಕನ್ಯಾ ದೇಸಾಯಿ ಮತ್ತು ಸೀತಾ ದಾನಗೇರಿ ಅವರ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.ಹಿಂದಿನ ಸಮ್ಮೇಳನದ ಅಧ್ಯಕ್ಷ ಭೀಮಾಶಂಕರ ಇಂದಿನ ಸರ್ವಾಧ್ಯಕ್ಷೆ ಸುಕನ್ಯಾ ದೇಸಾಯಿ ಅವರಿಗೆ ಧ್ವಜ ಹಸ್ತಾಂತರಿಸಿದರು.
ಧ್ವಜ ಪಡೆದು ಸರ್ವಾಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿ, ಸಮಾಜಕ್ಕೆ ನಮ್ಮನ್ನು ಮನುಷ್ಯನನ್ನಾಗಿ ಮಾಡುವ ಸಾಹಿತ್ಯ ಬೇಕು. ಪ್ರೀತಿಸುವುದನ್ನು ಕಲಿಸುವ, ಪರಸ್ಪರರನ್ನು ಗೌರವಿಸುವ ಸಾಹಿತ್ಯ ಬೇಕು. ನೋವು ನಲಿವುಗಳಿಗೆ ಸ್ಪಂದಿಸುವ ಸಾಹಿತ್ಯ ಬೇಕು. ಸಮಾಜದ ಅಂಕು-ಡೊಂಕು ತಿದ್ದುವ ಸಾಹಿತ್ಯ ಬೇಕು. ನಾವು ಸಮಾಜ ಪ್ರೀತಿಸಿ, ಅದರಲ್ಲಿ ನಮ್ಮನ್ನು ನಾವು ಕಂಡು ಕೊಳ್ಳಬೇಕು. ಜತೆಗೆ ಸರಳ, ಸತ್ಯ ಹಾಗೂ ಮಾನವಿಯತೆ ಎತ್ತಿ ಹಿಡಿಯುವ ಸಾಹಿತ್ಯ ಬೇಕು ಎಂದರು.ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ, ಸಾಹಿತ್ಯ ಪರಿಷತ್ ಮತ್ತು ನಾಡ ಧ್ವಜಾರೋಹಣ, ಸರ್ವಾಧ್ಯಕ್ಷೆ ಸುಕನ್ಯಾ ದೇಸಾಯಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತಂದು ಗಣ್ಯರ ಮೂರು ದ್ವಾರ, ಪುಸ್ತಕ ಮಳಿಗೆ ಉದ್ಘಾಟಿಸಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಗೋಷ್ಠಿ ನಡೆದವು. ಸಾವಿರಾರು ಜನರು ಕಾರ್ಯಕ್ರಮ ನೋಡಿ ಸಂಭ್ರಮಿಸಿದರು. ವೇದಿಕೆಯಲ್ಲಿ ತಾಲೂಕಿನ ಎಲ್ಲ ಗ್ರಾಪಂ ಅಧ್ಯಕ್ಷರು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರ, ಶಂಕರಯ್ಯ ಶಾಸ್ತ್ರಿ, ಶಿಕ್ಷಣಾಧಿಕಾರಿ ಬಷೀರ್ ಅಹ್ಮದ್ ಶೇಖ್ ಇತರ ಗಣ್ಯರು ಉಪಸ್ಥಿತರಿದ್ದರು.