ನರೇಗಾ ಯೋಜನೆ ಸಮರ್ಪಕ ಅನುಷ್ಠಾನವಾಗಲಿ: ಕೆ.ಎಂ. ಮಲ್ಲಿಕಾರ್ಜುನ

KannadaprabhaNewsNetwork | Published : Jan 31, 2025 12:46 AM

ಸಾರಾಂಶ

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದರೆ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಬದುಕನ್ನೇ ಕಿತ್ತುಕೊಂಡಂತಾಗಲಿದೆ ಎಂದು ಬ್ಯಾಡಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದರೆ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ಬದುಕನ್ನೇ ಕಿತ್ತುಕೊಂಡಂತಾಗಲಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸುವರ್ಣ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಾವೇರಿ ಜಿಪಂ, ಬ್ಯಾಡಗಿ ತಾಪಂ ಹಾಗೂ ಗ್ರಾಮ ಸ್ವರಾಜ್ಯ ಅಭಿಯಾನ ಕರ್ನಾಟಕ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಾಯಕ ಬಂಧು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ ಸೇರಿದಂತೆ ಅಲ್ಲಿನ ಜನರಿಗೆ ಗುಳೆ ಹೋಗದಂತೆ ಕೂಲಿ ಕೆಲಸಕ್ಕೆ ಅನುಕೂಲವಾಗುವ ರೀತಿಯಲ್ಲಿ ನರೇಗಾ ಯೋಜನೆ ಸಿದ್ಧಪಡಿಸಲಾಗಿದ್ದು, ಬಹಳ ಉತ್ತಮವಾದ ಯೋಜನೆ ಇದಾಗಿದೆ. ಇದನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸುವಲ್ಲಿ ಮೇಟಿಗಳು ಬಹಳ ನಿಷ್ಠೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.

ಮೂರು ದಿನಗಳ ತರಬೇತಿಗೆ ಹಾಜರಾದ ಕಾಯಕ ಬಂಧುಗಳಿಗೆ ಮಾತ್ರ ಮೇಟ್ ರಿಜಿಸ್ಟ್ರೇಷನ್ ಮಾಡಿ, ಕೆಲಸದಲ್ಲಿ ಮುಂದುವರಿಯಂತೆ ಮಾಡಬೇಕು. ಕೆಲಸದ ಸಮಯದಲ್ಲೇ ಎದುರಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ತಿಳಿದುಕೊಳ್ಳುವಲ್ಲಿ ಈ ತರಬೇತಿ ಕಾರ್ಯಕ್ರಮ ಅನುಕೂಲವಾಗುತ್ತದೆ. ಮೂರು ದಿನಗಳ ತರಬೇತಿಗೆ ತಪ್ಪದೆ ಹಾಜರಾಗಿ, ನರೇಗಾ ಯೋಜನೆಯಡಿ ಕಾಯಕ ಬಂಧುಗಳು ಸಮುದಾಯ ಹಾಗೂ ಗ್ರಾಮ ಪಂಚಾಯಿತಿಯ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.

ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಎಸ್.ಡಿ. ಬಳಿಗಾರ ಮಾತನಾಡಿ, ಕಾರ್ಮಿಕ ಕೇವಲ ಕಾರ್ಮಿಕನಾಗಿರದೇ ಯೋಜನೆ ಅಡಿಯಲ್ಲಿ ಬರುವ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ಮಾಲೀಕನಾಗಬೇಕು ಎಂಬುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು. ಈ ವೇಳೆ ತಾಲೂಕಿನ ಕದರಮಂಡಲಗಿ, ಬಿಸಲಹಳ್ಳಿ, ಘಾಳಪೂಜಿ, ಮಲ್ಲೂರು ಗ್ರಾಪಂನ 51 ಜನ ಕಾಯಕ ಬಂಧುಗಳು, ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಬಿದರಿ, ದಾದಾಪೀರ್ , ಫಕ್ಕೀರಮ್ಮ, ಬೀರಪ್ಪ, ತಾಂತ್ರಿಕ ಸಂಯೋಜಕ ಸಂತೋಷ್ ನಾಯಕ, ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ, ಬಿಎಫ್‌ಟಿಗಳಾದ ಮಹೇಶ್, ಹನುಮಂತಗೌಡ ಉಪಸ್ಥಿತರಿದ್ದರು. ಶ್ರುತಿ ಅಂಗರಗಟ್ಟಿ ಸ್ವಾಗತಿಸಿದರು. ಮಂಜುನಾಥ ಬಿದರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share this article