ಕೊಟ್ಟೂರು: ರಾಷ್ಟ್ರಕ್ಕೆ ಮತ್ತೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗದಂತೆ ತಡೆಯುವ ಹೋರಾಟದಲ್ಲಿ ರಾಜ್ಯದ ಮಠಾಧೀಶರು ಕಾಂಗ್ರೆಸ್ ಜತೆ ಕೈಜೋಡಿಸಬೇಕು ಎಂದು ಸಚಿವ ಸಂತೋಷ್ ಲಾಡ್ ಕರೆ ನೀಡಿದರು.
ಬುದ್ಧ, ಬಸವೇಶ್ವರ, ಅಂಬೇಡ್ಕರ್ ವಿಚಾರಧಾರೆಗಳನ್ನು ಬದಿಗಿಟ್ಟು ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟುಮಾಡಿ, ಕಳೆದ 10 ವರ್ಷಗಳಿಂದ ರಾಷ್ಟ್ರ ಕೊಳ್ಳೆ ಹೊಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ, ರಾಮಮಂದಿರ, ಪಾಕಿಸ್ತಾನ , ಮುಸ್ಲಿಂ ಈ ನಾಲ್ಕು ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ದೇಶದಲ್ಲಿ ತಾಂಡವವಾಡುತ್ತಿರುವ ಇತರ ಸಮಸ್ಯೆಗಳ ಬಗ್ಗೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರದ ಹಿತ ಚಿಂತನೆ ಮೋದಿ ಮತ್ತು ಬಿಜೆಪಿಯವರಿಗೆ ಖಂಡಿತ ಬೇಕಾಗಿಲ್ಲ. ಮತ ಪಡೆಯಲು ಮಾತ್ರ ರಾಷ್ಟ್ರಪ್ರೇಮದ ಮಾತುಗಳನ್ನು ಆಡುತ್ತಿರುವ ಅವರ ಬಂಡವಾಳ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಜನತೆ ಬಯಲಿಗೆ ತರಲು ಮುಂದಾಗಬೇಕು ಎಂದು ಅವರು ಹೇಳಿದರು.ದೇಶವು 2.2 ಲಕ್ಷ ಕೋಟಿ ಸಾಲ ಪಡೆಯುವಂತೆ ಮಾಡಿರುವುದೇ ಮೋದಿ ಮಹಾತ್ಮನ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ ಅವರು, ರಾಷ್ಟ್ರದ ಜಿಡಿಪಿ ದರ ಬಾಂಗ್ಲಾದೇಶವನ್ನು ಸಹ ಹಿಂದಿಕ್ಕಲು ಆಗಿಲ್ಲ ಎನ್ನುವುದು ಇವರ ಆಡಳಿತದ ಗುಣಮಟ್ಟ ತೋರಿಸುತ್ತದೆ ಎಂದರು.
ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರ ₹72 ಸಾವಿರ ಕೋಟಿ ಸಾಲಮನ್ನಾ ಮಾಡಿದರೆ ಮೋದಿ ಸರ್ಕಾರ ₹16 ಲಕ್ಷ ಕೋಟಿ ಕಾರ್ಪೊರೇಟ್ ಕಂಪನಿಗಳ ಸಾಲಮನ್ನಾ ಮಾಡಿದ್ದಾರೆ ಎಂದು ದೂರಿದರು.