ಚನ್ನಗಿರಿ ಪೊಲೀಸ್ ಇಲಾಖೆಯಿಂದ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಕಳ್ಳತನ, ನಕಲಿ ಬಂಗಾರ ಮಾರಾಟ ಹಾಗೂ ಇತರೆ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಆಗ ಮಾತ್ರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಉಜ್ಜಿನಕೊಪ್ಪ ಹೇಳಿದರು.
ಅಪರಾಧಗಳು ಯಾವ ಕ್ಷಣದಲ್ಲಿ ಅಥವಾ ಯಾವ ಸಂದರ್ಭದಲ್ಲಿ ನಡೆಯುತ್ತವೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಕೆಲವು ಅಪರಾಧಗಳನ್ನು ತಡೆಯುವುದು ಸಾರ್ವಜನಿಕರ ಕೈಯಲ್ಲೇ ಇರುತ್ತದೆ. ಆದ್ದರಿಂದ ಪೊಲೀಸರನ್ನು ಸಾರ್ವಜನಿಕರು ಸ್ನೇಹಿತರಂತೆ ಕಾಣುತ್ತಾ ಸರಿಯಾದ ಮಾಹಿತಿಯನ್ನು ನೀಡಬೇಕು. ಆಗ ಅಪರಾಧಗಳನ್ನು ಸುಲಭವಾಗಿ ತಡೆಯಬಹುದು ಎಂದರು.
ನಿರ್ಜನ ಪ್ರದೇಶಗಳಿಗೆ ವಾಯು ವಿಹಾರಕ್ಕೆಂದು ಹೋಗುವವರು ಚಿನ್ನಾಭರಣ ಧರಿಸಿ ಹೋಗಬೇಡಿ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಅಧಿಕವಾಗಿವೆ. ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಸಿಪಿಐ ಸಂತೋಷ್ ಕುಮಾರ್, ಪುರಸಭೆಯ ಸದಸ್ಯ ಶ್ರೀಕಾಂತ್, ತಿಪ್ಪೇಸ್ವಾಮಿ, ಶಿಕ್ಷಕ ಖದೀರ್, ಗಣೇಶ್ ರಾಯ್ಕರ್, ಸಾರ್ವಜನಿಕರು ಹಾಜರಿದ್ದರು.
ಚನ್ನಗಿರಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾತನಾಡಿದರು.