ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಸಚಿವ ಡಿ ಸುಧಾಕರ್
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಲಿ ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ತಾಲೂಕಿನ ಧರ್ಮಪುರ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಧರ್ಮಪುರ ಗ್ರಾಮ ಪಂಚಾಯ್ತಿಯ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತೆಗೆದುಕೊಂಡು ಹೋಗುವ ಸಿದ್ದರಾಮಯ್ಯನವರ ನೆಚ್ಚಿನ ಕಾರ್ಯಕ್ರಮವಾದ ಜನತಾ ದರ್ಶನ ಕಾರ್ಯಕ್ರಮವನ್ನು ಗ್ರಾಮ ಮಟ್ಟಕ್ಕೂ ತಂದಿದ್ದು ಖುಷಿಯಾಗಿದೆ.ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಜನರ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಇತ್ಯರ್ಥಗೊಳಿಸಿ ಸೌಲಭ್ಯ ಒದಗಿಸಲಾಗುವುದು. ಪದವೀಧರ ನಿರುದ್ಯೋಗಿಗಳಿಗೆ ಬರುವ ತಿಂಗಳಿನಿಂದ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನೆರಡು ತಿಂಗಳಲ್ಲಿ ಪಡಿತರದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗಿದೆ. ನಮ್ಮ ಸರ್ಕಾರದ ವತಿಯಿಂದ ಈಗಾಗಲೇ ಸಾಕಷ್ಟು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದೇವೆ ಎಂದರೆ.
ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು, ನಮ್ಮ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಆಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಕುಂದುಕೊರತೆಗಳನ್ನು ಅವರ ಮನೆಬಾಗಿಲಿಗೆ ಹೋಗಿ ಪರಿಹರಿಸುವ ಈ ಕಾರ್ಯಕ್ರಮ ವಿಭಿನ್ನವಾದುದು. ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಗ್ರಾಮ ಮಟ್ಟಕ್ಕೆ ತಂದ ಸಚಿವರ ಜನಪರ ಕಾಳಜಿ ಮೆಚ್ಚುವಂತದ್ದು. ಈಗಾಗಲೇ ವಿವಿಧ ಇಲಾಖೆಗಳಲ್ಲಿ ಗುರಿ ನಿಗದಿಪಡಿಸಿಕೊಂಡು ಅವುಗಳನ್ನು ಸಾಧಿಸಲಾಗಿದೆ. ಜನರ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಲಾಗುವುದು.
ತಹಸೀಲ್ದಾರ್ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಯೋಜನಾ ನಿರ್ದೇಶಕ ರಂಗಸ್ವಾಮಿ, ಉಪ ವಿಭಾಗಾಧಿಕಾರಿ ಕಾರ್ತಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಇಓ ಸತೀಶ್ ಕುಮಾರ್, ಡಿವೈಎಸ್‌ಪಿ ಚೈತ್ರಾ, ಧರ್ಮಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಹನುಮಂತರಾಯಪ್ಪ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ಖಾದಿ ರಮೇಶ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
137 ಫಲಾನುಭವಿಗಳಿಗೆ ಆದೇಶ ಪತ್ರ