ವೇಷದ ಹುಲಿಯ ನೀತಿ ಇಂದಿನ ಯುವಪೀಳಿಗೆಗೆ ತಲುಪಲಿ: ಡಾ. ಮೈಥಿಲಿ ಪಿ. ರಾವ್

KannadaprabhaNewsNetwork |  
Published : May 28, 2024, 01:06 AM IST
ಪೊಟೋ೨೭ಸಿಪಿಟಿ೫: ರಾಮನಗರದಲ್ಲಿ ಸಾಹಿತಿ ಡಾ. ಎಂ. ಬೈರೇಗೌಡರ ವೇಷದ ಹುಲಿ ನಾಟಕ ಮರುಮುದ್ರಣ ಮತ್ತು ಹಿಂದಿ ಅವತರಣಿಕೆ ವ್ಯಾಘ್ರವೇಶಿ ಕೃತಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಪುರಾಣ ಮತ್ತು ಜಾನಪದ ಸಂಪತ್ತನ್ನು ಒಟ್ಟುಗೂಡಿಸಿ ವರ್ತಮಾನದ ತುರ್ತುಗಳನ್ನು ಅರಗಿಸಿಕೊಂಡು ಭೈರೇಗೌಡರು ರಚಿಸಿರುವ ‘ವೇಷದ ಹುಲಿ’ ನಾಟಕವು ಸಮರ್ಥವಾಗಿ ಹಿಂದಿಗೆ ಅನುವಾದಗೊಂಡಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಸೃಜನಶೀಲ ಕೃತಿಯೊಂದರ ಅನುವಾದ ಯಾರು ಮಾಡಿದ್ದಾರೆ? ಮೂಲ ಕೃತಿಯ ಗಟ್ಟಿತನ ಎಷ್ಟು? ಅದು ಸಾರ್ವಕಾಲಿಕವೇ? ಈ ಪ್ರಶ್ನೆಗಳ ಮೂಲಕ ಅನುವಾದಕ್ಕೆ ಪ್ರವೇಶ ಪಡೆಯುವುದು ಮುಖ್ಯ. ಹಾಗಾದಾಗ ಎರಡೂ ಭಾಷೆಗಳಿಗೂ ಗಾಂಭೀರ್ಯ, ಗೌರವ ದೊರೆಯುತ್ತದೆ ಎಂದು ಜೈನ್ ಕಾಲೇಜಿನ ನಿಕಟಪೂರ್ವ ಡೀನ್, ಪ್ರಾಧ್ಯಾಪಕಿ ಡಾ. ಮೈಥಿಲಿ ಪಿ. ರಾವ್ ಅಭಿಪ್ರಾಯಪಟ್ಟರು. ತಾಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ. ಎಂ. ಭೈರೇಗೌಡರ ‘ವೇಷದ ಹುಲಿ ನಾಟಕ ಮರುಮುದ್ರಣ’ ಮತ್ತು ಹಿಂದಿ ಅವತರಣಿಕೆ ‘ವ್ಯಾಘ್ರವೇಶಿ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದಿ ಅನುವಾದಿತ ಕೃತಿ ‘ವ್ಯಾಘ್ರವೇಶಿ’ ಕುರಿತು ಮಾತನಾಡಿದರು.ಅನುವಾದ ಎಂಬುದು ಕೃತಕ ಬುದ್ಧಿವಂತಿಕೆಯಿಂದ ನಡೆಯಬಾರದು, ಅಗತ್ಯ ಪದಸಂಪತ್ತು ಅನುವಾದಕನಲ್ಲಿ ಇರಬೇಕು. ಈ ಹಿನ್ನೆಲೆಯಲ್ಲಿ ಅಪಾರ ಇತಿಹಾಸ, ಪುರಾಣ ಮತ್ತು ಜಾನಪದ ಸಂಪತ್ತನ್ನು ಒಟ್ಟುಗೂಡಿಸಿ ವರ್ತಮಾನದ ತುರ್ತುಗಳನ್ನು ಅರಗಿಸಿಕೊಂಡು ಭೈರೇಗೌಡರು ರಚಿಸಿರುವ ‘ವೇಷದ ಹುಲಿ’ ನಾಟಕವು ಸಮರ್ಥವಾಗಿ ಹಿಂದಿಗೆ ಅನುವಾದಗೊಂಡಿದೆ. ಈ ಕೃತಿಯ ನೀತಿ ಇಂದಿನ ಯುವಪೀಳಿಗೆಗೆ ತಲುಪಬೇಕಾದ ಅವಶ್ಯಕತೆಯಿದೆ ಎಂದರು. ಪ್ರೀತಿಯ ಮುಲಾಮು: ಈ ಕೃತಿಯಲ್ಲಿನ ವಸ್ತು ತುಂಬಾ ನಕಾರಾತ್ಮಕ ಅಂಶಗಳನ್ನು ಒಳಗೊಂಡಿದ್ದು, ಅವನ್ನೆಲ್ಲ ಹೇಗೆ ಸಕಾರಾತ್ಮಕಗೊಳಿಸಿ ಕೊಡಬಹುದೆಂದು ‘ವೇಷದ ಹುಲಿ’ ನಾಟಕದ ಕರ್ತೃ ಡಾ. ಎಂ. ಭೈರೇಗೌಡ ತೋರಿಸಿಕೊಟ್ಟಿದ್ದಾರೆ. ಮನುಷ್ಯನಲ್ಲಿ ಅಡಗಿರಬಹುದಾದ ಕ್ರೌರ್ಯವನ್ನು ಪ್ರೀತಿಯ ಮುಲಾಮಿನಿಂದ ತಣ್ಣಗಾಗಿಸುವಲ್ಲಿ ಕೃತಿಯ ಹೆಚ್ಚುಗಾರಿಕೆ ಅಡಕವಾಗಿದೆ. ಇಡೀ ಕೃತಿಯ ತುಂಬ ಜಾನಪದೀಯ ಶಬ್ಧಗಳು ನರ್ತಿಸುತ್ತವೆ. ಅವುಗಳಿಗೆ ಹದವಾದ ಹಾಸ್ಯ, ವಿಡಂಬನೆ, ಮಾತಿನ ಮೋಡಿಗಳಿಂದ ಸಹೃದಯದಲ್ಲಿ ಸಂಚಲನ ಮೂಡಿಸುವ ಕೃತಿಯಾಗಿ ನಿರ್ಮಾಣಗೊಂಡಿದೆ ಎಂದರು. ಕನ್ನಡದ ಕಂಪು ಹಿಂದಿಗೆ: ಕೃತಿಗಳ ಬಿಡುಗಡೆಗೊಳಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಕೃತಿಗಳು ಇತರೆ ಭಾಷೆಗಳಿಗೆ ಅನುವಾದವಾಗುತ್ತವೆ ಎಂದರೆ ಅದರ ಗಟ್ಟಿತನ ಎಷ್ಟಿರಬಹುದೆಂದು ತಿಳಿದುಬರುತ್ತದೆ. ಉತ್ತರ ಭಾರತದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಹಿಂದಿ ಭಾಷೆಗೆ ಕನ್ನಡದ ಕೃತಿಯೊಂದು ಅನುವಾದಗೊಂಡು ಕನ್ನಡ ಕಂಪನ್ನು ಹಿಂದಿಗರು ಅನುಭವಿಸುವಂತೆ ಮಾಡಿದ ಅನುವಾದಕ ಡಾ. ದೇವರಾಜ್ ಹಾಗೂ ನಾಟಕಕಾರ ಡಾ. ಎಂ. ಭೈರೇಗೌಡರು ಅಭಿನಂದನಾರ್ಹರು ಎಂದರು.ವೇಷದ ಹುಲಿ ನಾಟಕ ಕೃತಿ ಕುರಿತು ಮಾತನಾಡಿದ ಉಪನ್ಯಾಸಕ ಅರುಣ್ ಕವಣಾಪುರ, ಪ್ರೀತಿಯಿಂದ ಜಗತ್ತನ್ನೇ ಜಯಿಸಬಹುದೆಂಬ ತತ್ವವನ್ನು ಈ ಕೃತಿ ಪ್ರತಿಪಾದಿಸುತ್ತದೆ ಎಂದರು. ನಾಟಕಕಾರ ಡಾ. ಎಂ. ಭೈರೇಗೌಡ ಮಾತನಾಡಿ, ಕನ್ನಡ ಭಾಷೆಯ ಕೃತಿ ಮತ್ತೊಂದು ಭಾಷೆಗೆ ಅನುವಾದವಾಗುತ್ತಿದೆ ಎಂದರೆ ಅದು ಹಲವು ಭಾಷೆಗಳಿಗೆ ಅನುವಾದಗೊಳ್ಳುವ ಯೋಗ್ಯತೆ ಪಡೆದಿರಬೇಕು. ಹಾಗೆಯೇ ಎರಡು ಭಾಷೆಗಳ ಸೇತುವಾಗಿ ಭಾಷಾ ಬಾಂಧವ್ಯ ವೃದ್ಧಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ. ಹಾಗೆಯೇ ಅನುವಾದಗೊಳಿಸಿದ ಡಾ. ಎನ್. ದೇವರಾಜ್ ಅವರು ಅಭಿನಂದನಾರ್ಹರು ಎಂದರು.ಮಾಜಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಹಾಗೂ ವೇಷದ ಹುಲಿ ನಾಟಕದ ಅನುವಾದಕ ಡಾ. ಎನ್. ದೇವರಾಜ್ ಮಾತನಾಡಿ, ಕನ್ನಡದ ಕೃತಿಗಳನ್ನು ಹಿಂದಿಗರು ತಮ್ಮದೇ ಭಾಷೆಯ ಕೃತಿಯೆಂಬ ಪ್ರೀತಿಯಿಂದ ಓದಬೇಕು. ಪ್ರೇಮ ಚಂದಾದಿ ಹಲವು ಗಣ್ಯರ ಕೃತಿಗಳನ್ನು ಕನ್ನಡದ್ದೇ ಕೃತಿಗಳೆಂದು ನಾವು ಓದುತ್ತಿರುವಂತೆ, ಉತ್ತರದವರೂ ಕೂಡ ಪ್ರೀತಿಯಿಂದಲೇ ಓದುವಂತಾಗಬೇಕೆಂಬ ಆಶಯ ವ್ಯಕ್ತಪಡಿಸಿದರು.ಕಸಾಪ ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಜೇಶ್ ಕವಣಾಪುರ ಉಪಸ್ಥಿತರಿದ್ದರು. ನವೀನ್ ರಾಮನಗರ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಬೆಳ್ಳೂರು ವೆಂಕಟಪ್ಪ, ಚನ್ನಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ್ ರಾಂಪುರ, ಸಾಹಿತಿಗಳಾದ ಡಾ. ಅಂಕನಹಳ್ಳಿ ಪಾರ್ಥ, ವಿಜಯ್ ರಾಂಪುರ, ಅಬ್ಬೂರು ಶ್ರೀನಿವಾಸ್, ಗಾಯಕ ನವೀನ್, ಎಚ್.ವಿ. ಮೂರ್ತಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!