ಕನಕ ಜಯಂತಿ ಆಚರಣೆಗೆ ಸಮಾಜ ಮುಖಂಡರು ಕೈ ಜೋಡಿಸಲಿ: ತಹಸೀಲ್ದಾರ್‌

KannadaprabhaNewsNetwork | Published : Nov 15, 2024 12:36 AM

ಸಾರಾಂಶ

ದಾಸಶ್ರೇಷ್ಠ ಕನಕ ದಾಸರ ಜಯಂತಿ ಕಾರ್ಯಕ್ರಮ ನ.18ರಂದು ಹಮ್ಮಿಕೊಂಡಿದ್ದು, ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ ಅಧ್ಯಕ್ಷತೆಯಲ್ಲಿ ಕುರುಬ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಯಿತು.

- ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾಸಶ್ರೇಷ್ಠ ಕನಕ ದಾಸರ ಜಯಂತಿ ಕಾರ್ಯಕ್ರಮ ನ.18ರಂದು ಹಮ್ಮಿಕೊಂಡಿದ್ದು, ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ ಅಧ್ಯಕ್ಷತೆಯಲ್ಲಿ ಕುರುಬ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಯಿತು.

ಕಳೆದ ಬಾರಿ ಕನಕ ಜಯಂತಿ ಕಾರ್ಯಕ್ರಮಕ್ಕೆ ತಗುಲಿದ ಖರ್ಚು ವೆಚ್ಚಗಳ ಬಗ್ಗೆ ತಹಸೀಲ್ದಾರ್ ಮಾತನಾಡಿ, ಜಯಂತಿ ಆಚರಣೆಗೆ ಸರ್ಕಾರ ₹20 ಸಾವಿರ ಮಂಜೂರು ಮಾಡುತ್ತದೆ. ಆದರೆ, ಈ ಬಜೆಟ್ ಮೀರಿ ಖರ್ಚಾಗಿತ್ತು. ಸಮಾಜದ ಮುಖಂಡರು ಈ ಬಗ್ಗೆ ಗಮನಹರಿಸಿ, ಕೈ ಜೋಡಿಸಿ, ಕನಕ ಜಯಂತಿ ಆಚರಿಸಬೇಕಿದೆ ಎಂದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ ಮಾತನಾಡಿ, ಕನಕದಾಸರು ಕುರುಬ ಸಮಾಜದ ಒಬ್ಬ ಮಹಾಪುರುಷರಾಗಿದ್ದಾರೆ. ಅವರ ಜಯಂತಿ ಆಚರಣೆಗೆ ಸಮಾಜದ ಪ್ರತಿಯೊಬ್ಬರೂ ಸಹಕರಿಸಿ, ಅದ್ಧೂರಿಯಾಗಿ ಆಚರಿಸೋಣ ಎಂದು ತಿಳಿಸಿದರು.

ನ.18ರಂದು ಟಿ.ಬಿ. ವೃತ್ತದ ಕನಕದಾಸ ಪ್ರತಿಮೆಗೆ ಪೂಜೆ ಸಲ್ಲಿಸಿ, ಸುಮಂಗಲೆಯರ ಪೂರ್ಣಕುಂಭದೊಂದಿಗೆ ಹಾಗೂ ಡಿ.ಜೆ., ಡೊಳ್ಳು ಮುಂತಾದ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಲಾಗುವುದು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಕನಕ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ಸಮಾಜದ ಎಲ್ಲ ಮುಖಂಡರು, ಪುರಸಭೆ ಅಧ್ಯಕ್ಷರು, ಜನಪ್ರತಿನಿಧಿಗಳು, ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು, ಕುರುಬ ಸಮಾಜ ಹಾಗೂ ಹಾಲುಮತ ಮಹಾಸಭಾದ ಪದಾಧಿಕಾರಿಗಳು ಭಾಗವಹಿಸಲು ಮನವಿ ಮಾಡಿದರು.

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಮಾಜ ಅಧ್ಯಕ್ಷ ನೆಲಹೊನ್ನೆ ಮೋಹನ, ಹಾಲು ಮತ ಮಹಾಸಭಾ ಅಧ್ಯಕ್ಷ ರಾಜು ಕಡಗಣ್ಣಾರ, ಮಹಿಳಾ ಅಧ್ಯಕ್ಷೆ ಪಂಕಜಾ ಅರುಣ್ ಕುಮಾರ್, ಸೌಮ್ಯ, ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷ ದಿಡಗೂರು ಪಾಲಾಕ್ಷಪ್ಪ, ಕುರುಬ ಸಮಾಜದ ಗೌರವಾಧ್ಯಕ್ಷ ಗಾಳಿ ನಾಗರಾಜ್, ಕಾರ್ಯಾಧ್ಯಕ್ಷ ಬಾಬು ಹೋಬಳದಾರ್, ಕಾರ್ಯದರ್ಶಿ ರಘು, ಮುಖಂಡ ಕಾಯಿಬರುಡೆ ಸಣ್ಣಸಿದ್ದಪ್ಪ ಇತರ ಮುಖಂಡರು, ಇಲಾಖೆಗಳ ಅಧಿಕಾರಿಗಳು ಇದ್ದರು.

- - - -13ಎಚ್.ಎಲ್.ಐ1: ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಕನಕ ಜಯಂತಿ ಹಿನ್ನೆಲೆ ತಹಸೀಲ್ದಾರ್ ಪಟ್ಟರಾಜ ಗೌಡ ಅಧ್ಯಕ್ಷತೆಯಲ್ಲಿ ಸಿದ್ಧತಾ ಸಭೆ ನಡೆಯಿತು.

Share this article