- ಅಧಿಕಾರಸ್ಥರ ಮನೆ ಸೀರೆ ಒಗೆಯಲು ಜಿಲ್ಲಾಡಳಿತಕ್ಕೆ ಕಳಿಸಿ: ಹರೀಶ್ ವಾಗ್ದಾಳಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸೂರ್ಯ-ಚಂದ್ರ ಇರುವುದೆಷ್ಟು ಸತ್ಯವೋ ದಾವಣಗೆರೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ. ಇದನ್ನು ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾಡಳಿತ ನೆನಪಿಟ್ಟುಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಗುಟುರು ಹಾಕಿದರು.ನಗರದಲ್ಲಿ ಸೋಮವಾರ ಬಿಜೆಪಿ ಶಾಸಕ ಬಿ.ಪಿ.ಹರೀಶ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ಹೋರಾಟದಲ್ಲಿ ಅವರು ಮಾತನಾಡಿದರು. ಕಾಡಜ್ಜಿಯಲ್ಲಿ ಅಕ್ರಮ ಮಣ್ಣು ಕೊಂಡೊಯ್ದಿದ್ದನ್ನು ತಡೆಯಲು ಹೋದವರ ಮೇಲೆಯೇ ಅಟ್ರಾಸಿಟಿ ಕೇಸ್ ಮಾಡಿಸಿದ್ದಾರೆ. ನಾವೂ ಹಿಂದೆ ಆಡಳಿತ ನಡೆಸಿದ್ದೇವೆ. ಯಾವತ್ತೂ ಹೀಗೆಲ್ಲಾ ಮಾಡಲಿಲ್ಲ. ಇದೆಲ್ಲ ಬಹಳ ದಿನ ನಡೆಯುವುದಿಲ್ಲ. ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಆಡಳಿತ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ನಮ್ಮ ಆಡಳಿತದಲ್ಲಿ ನಾವ್ಯಾರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಎಸ್.ಎಸ್. ಮಲ್ಲಿಕಾರ್ಜುನ ದ್ವೇಷ ರಾಜಕಾರಣ ಬಿಟ್ಟು, ಉತ್ತಮ ಆಡಳಿತ ನೀಡಿ, ಅಭಿವೃದ್ಧಿ ಪರ ಕೆಲಸ ಮಾಡಲಿ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ, ಬಿಜೆಪಿ ಅತ್ಯಂತ ಬಲವಾಗಿದೆ. ಮತ್ತೆ ಲೋಕಸಭೆ, ವಿಧಾನಸಭೆ ಚುನಾವಣೆ ಬಂದೇ ಬರುತ್ತವೆ ಎಂದು ಎಚ್ಚರಿಸಿದರು.ಕಾಡಜ್ಜಿ ಕೃಷಿ ಫಾರಂನ ಸರ್ಕಾರಿ ಜಮೀನಿನ ಮಣ್ಣು ಲೂಟಿಯಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ. ಅಲ್ಲಿ ತೆಗೆಯುತ್ತಿದ್ದ ಮಣ್ಣನ್ನು ನೋಡಿದರೆ ಯಾರು ಮಣ್ಣನ್ನು ಕಳ್ಳತನ ಮಾಡಿದ್ದಾರೋ ಅಂತಹವರ ಮೇಲೆ ಸುಮೋಟೋ ಕೇಸ್ ಮಾಡುವುದನ್ನು ಬಿಟ್ಟು, ನಮ್ಮ ಶಾಸಕ ಬಿ.ಪಿ.ಹರೀಶ್ ವಿರುದ್ಧವೇ ಆರೋಪ ಮಾಡಿ, ಅಟ್ರಾಸಿಟಿ ಕೇಸ್ ಮಾಡಿಸಿದ್ದಾರೆ. ನಮ್ಮ ಪಕ್ಷದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳ ಮುಖಂಡರು, ಕಾರ್ಯಕರ್ತರಿದ್ದಾರೆ. ನಾವೂ ಸಹ ನೀವು ಮಾಡಿದಂತೆ ಮಾಡಬಹುದು. ಆದರೆ, ನಾವು ಅಂತಹ ಕೆಲಸಗಳನ್ನೆಲ್ಲಾ ಮಾಡುವುದಿಲ್ಲ ಎಂದು ಜಿಲ್ಲಾ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಡಜ್ಜಿಯಲ್ಲಿ ಮಣ್ಣು ಎತ್ತುವಳಿ ಮಾಡಿದವರನ್ನು ತಕ್ಷಣವೇ ಬಂಧಿಸಬೇಕು. ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು. ಅಧಿಕಾರಸ್ಥರ ಆಣತಿಗೆ ತಕ್ಕಂತೆ ವರ್ತಿಸಬಾರದು ಎಂದು ತಾಕೀತು ಮಾಡಿದರು.- - -
* ಅಧಿಕಾರಸ್ಥರ ಮನೆ ಸೀರೆ ಒಗೆಯಲು ಜಿಲ್ಲಾಡಳಿತಕ್ಕೆ ಕಳಿಸಿ!- ಡಿಸಿ, ಎಸ್ಪಿಯೇ ಕಳ್ಳರು ಅಂತಾ ದೂರು ಕೊಡ್ತೀವಿ, ದಾಖಲಿಸಿ: ಹರೀಶ - - - ದಾವಣಗೆರೆ: ನಮ್ಮ ಜಿಲ್ಲೆಯಲ್ಲಿ ಡಿಸಿ, ಎಸ್‌ಪಿಯಿಂದ ಸಚಿವರು ಕಳ್ಳತನ ಮಾಡಿಸುತ್ತಿದ್ದಾರೆ. ಆಲಿ ಬಾಬಾ ಮತ್ತು ಚಾಲೀಸ್ ಚೋರ್‌ರಂತೆ ಜಿಲ್ಲೆಯ ಸ್ಥಿತಿಯಾಗಿದೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹರಿಹಾಯ್ದರು. ಬಿಜೆಪಿ-ಜೆಡಿಎಸ್ ಪ್ರತಿಭಟನೆ ವೇಳೆ ಗ್ರಾಮಾಂತರ ಠಾಣೆಯಲ್ಲಿ ಡಿವೈಎಸ್ಪಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಕ್ರಮ ಮಣ್ಣು ತಡೆಯಲು ಹೋದ ತಮ್ಮ ವಿರುದ್ಧವೇ ಅಟ್ರಾಸಿಟಿ ಕೇಸ್ ಮಾಡಿಸಿದ್ದಾರೆ. ಮೊದಲು ಮಣ್ಣು ಲೂಟಿ ಮಾಡಿದವರ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿ ಎಂದು ಪಟ್ಟುಹಿಡಿದರು. ಮಣ್ಣು ಕಳ್ಳರನ್ನು ಇಲ್ಲಿಗೆ ಕರೆಸಿ. ಡಿಸಿ, ಎಸ್ಪಿಯೇ ಕಳ್ಳರು. ಸರ್ಕಾರಿ ಆಸ್ತಿಯೇನು ಇಂತಹವರ ಅಪ್ಪನದಾ? ಮಣ್ಣು ಸಾಗಾಟ ಮಾಡುತ್ತಿದ್ದ ವಾಹನಗಳ ದಾಖಲೆಗಳು ನಮ್ಮ ಬಲಿ ಇದೆ. ಅಕ್ರಮ ಮಣ್ಣು ಸಾಗಿಸಿದವರ ಬಂಧಿಸಲು ಆಗದಿದ್ದರೆ ಅಧಿಕಾರಸ್ಥರ ಮನೆಯಲ್ಲಿ ಸೀರೆ ಒಗೆಯೋಕೆ ಜಿಲ್ಲಾಡಳಿತವನ್ನೇ ಕಳಿಸಿಬಿಡಿ. ಜಿಲ್ಲಾಡಳಿತ ಅಧಿಕಾರಸ್ಥರ ಮನೆಯ ಸೀರೆ ಒಗೆಯಲಿ ಎಂದು ಕಿಡಿಕಾರಿದರು. - - - (ಕೋಟ್)ಕಾಡಜ್ಜಿ ಕೃಷಿ ಇಲಾಖೆಗೆ ಸೇರಿದ ಮಣ್ಣು ಅಕ್ರಮ ಸಾಗಾಟದ ಬಗ್ಗೆ ಎಸ್ಪಿಗೆ ದೂರು ನೀಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾರು ಮಣ್ಣು ಹೊಡೆದಿದ್ದಾರೋ ಸಿಸಿ ಕ್ಯಾಮರಾ ಪರಿಶೀಲಿಸಲು ಹೇಳಿದ್ದೇವೆ. ಲಾರಿ ಇದ್ದರೂ ಅನಾಮಧೇಯರ ವಿರುದ್ದ ಕೃಷಿ ಅಧಿಕಾರಿಗಳು ಕಂಪ್ಲೇಂಟ್ ಕೊಟ್ಟಿದ್ದಾರೆ. ಬಿ.ಪಿ.ಹರೀಶ ಜಾತಿ ನಿಂದನೆ ಕೇಸ್ ಬಗ್ಗೆ ನಾವ್ಯಾರೂ ಮಾತನಾಡಲಿಲ್ಲ. ಅಂತಹ ನೂರು ಕೇಸ್ ಹಾಕಿದರೂ ಫೇಸ್ ಮಾಡುತ್ತೇನೆಂದು ಬಿ.ಪಿ.ಹರೀಶ ಹೇಳಿದ್ದಾರೆ. - ಜಿ.ಎಂ.ಸಿದ್ದೇಶ್ವರ, ಕೇಂದ್ರದ ಮಾಜಿ ಸಚಿವ- - -- - - (-ಸಿದ್ದೇಶ್ವರ)