ಧಾರವಾಡ: ಕಳೆದ ಜನವರಿಯ ಆಶಾಗಳ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಕನಿಷ್ಟ ₹10 ಸಾವಿರ ಮಾಸಿಕ ಗೌರವಧನದ ಆದೇಶ ಮತ್ತು ರಾಜ್ಯ ಬಜೆಟ್‌ನಲ್ಲಿ ₹1 ಸಾವಿರ ಹೆಚ್ಚಳದ ಆದೇಶ ಮಾಡಲು ಆಗ್ರಹಿಸಿ ಬುಧವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ನುಡಿದಂತೆ ನಡೆಯುವ ಸರ್ಕಾರ ರಾಜ್ಯದ 42 ಸಾವಿರ ಆಶಾಗಳಿಗೆ ಆದೇಶ ಮಾಡಿ ತನ್ನ ಮಾತನ್ನು ಉಳಿಸಿಕೊಳ್ಳಬೇಕು. ಏಪ್ರಿಲ್ 2025ರಿಂದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ₹10 ಸಾವಿರ ಗೌರವಧನವನ್ನು ನೀಡಲು ಆದೇಶಿಸಬೇಕು. ಇದೇ ಬಜೆಟ್‌ನಲ್ಲಿ ರಾಜ್ಯದ ನಿಗದಿತ ಗೌರವಧನ ₹1 ಸಾವಿರ ಹೆಚ್ಚಿಸಿ ಆದೇಶಿಸಬೇಕು. ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ ಇನ್ನುಳಿದ ಬಹುದಿನಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಭುವನಾ ಬಳ್ಳಾರಿ, ಮಾತು ಕೊಟ್ಟಂತೆ ಸೂಕ್ತ ಆದೇಶಗಳನ್ನು ಮಾಡುವ ಬದಲಾಗಿ, ಕಳೆದ 12 ವರ್ಷಗಳಿಂದ ಕೇವಲ ಮಾಸಿಕ ಆರು ಸಾವಿರಕ್ಕೆ ದುಡಿದ ಆಶಾ ಸುಗಮಕಾರರ ಕೆಲಸದಿಂದ ಬಿಡುಗಡೆಯ ಆದೇಶ ಹೊರಡಿಸಿದ್ದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಹಿಂದಿನ ಚರ್ಚೆಯಂತೆ ಸುಗಮಕಾರರಿಗೆ ಹೆಚ್ಚಿನ ಗೌರವಧನ, ದಿನ-ಪ್ರಯಾಣ ಭತ್ಯೆ ನೀಡಿ ಅವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಲು ಮರು ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡರಾದ ಮಂಜುಳಾ ಗಾಡಗೋಳಿ, ಭಾರತಿ ಶೆಟ್ಟರ್, ಸರೋಜಾ ಮಡಿವಾಳರ, ಶೋಭಾ ಹಿರೇಮಠ, ಗಿರಿಜಾ ಭೂಸನೂರಮಠ, ಜಯಶ್ರೀ ದೇಸಾಯಿ, ರಾಜೇಶ್ವರಿ ಕೋರಿ, ಸುಜಾತಾ ಹಿರೇಮಠ, ಶೋಭಾ ಸಂತಭಾನವರ, ರಾಧಾ ರಾಟೊಳ್ಳಿ, ಸಂಗೀತಾ ಗೊರವನಕೊಳ್ಳ, ಶೈಲಾ ಮುದುಗಲ್, ರೂಪಾ ಅನಂತಪುರ,ಶೋಭಾ ಯಾದವ್ ಮತ್ತಿತರರು ಇದ್ದಾರೆ.