ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇತ್ತೀಚೆಗೆ ಸರ್ಕಾರ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಪ್ರೊ.ಪ್ರಕಾಶ್ ಗೌಡ ಹೇಳಿದರು.ಇಲ್ಲಿನ ಹಿಟ್ನಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿವಿನ್ಯಾಸ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ಉತ್ತಮ ಗ್ರಂಥಾಲಯ, ಉತ್ತಮ ಕಂಪ್ಯೂಟರ್ ಲ್ಯಾಬ್, ಅತ್ಯುತ್ತಮ ಕ್ರೀಡಾ ಸಲಕರಣೆಗಳು, ಅತ್ಯುತ್ತಮ ಉಪನ್ಯಾಸಕ ವರ್ಗ, ರಾಷ್ಟ್ರೀಯ ಸೇವಾ ಯೋಜನೆ ಸೇರಿದಂತೆ ಹಲವಾರು ಶೈಕ್ಷಣಿಕ ಯೋಜನೆಗಳಿಗಾಗಿ ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಹಲವಾರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪದವಿ ಹಂತದಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಇಬ್ರಾಹಿಂ ಎಂ.ಕೆ. ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಾಲೇಜು ರೂಪಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಟಿ.ಎಚ್. ಬಸವರಾಜ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನಿತಾ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಟರಾಜ್ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಿಂಗಪ್ಪ ಕಂಬಳಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಫಣಿರಾಜ್ ಬಿ. ಮಾತನಾಡಿದರು.ಕಾರ್ಯಕ್ರಮವನ್ನು ನೀಲಾಂಬರಿ ಪ್ರಾರ್ಥಿಸಿದರು. ಉಪನ್ಯಾಸಕ ಬಸವರಾಜ್ ಸಂಕನಗೌಡರ ಸ್ವಾಗತಿಸಿದರು. ಚಂದ್ರಶೇಖರ ಹುಬ್ಬಳ್ಳಿ ನಿರೂಪಿಸಿದರು. ಉಪನ್ಯಾಸಕರಾದ ಮಂಜುನಾಥ್ ಮುತ್ತಾಳ, ತಾಜುದ್ದೀನ್, ಡಾ.ಮಂಜುಳಾ, ಮಂಜುನಾಥ ಜೆ., ರವಿ ಹಿರೇಮಠ, ಅಡಿವೆಪ್ಪ, ಮಂಜುನಾಥ ಎಸ್., ಡಾ.ಹನುಮಂತರಾಯಡು ಇದ್ದರು. ಸಿದ್ದಾಚಾರಿ ವಂದಿಸಿದರು.