10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿಯೆ ಕಡ್ಡಾಯ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಲಿ: ಹನುಮಂತಪ್ಪ ಈಟಿ

KannadaprabhaNewsNetwork | Published : Feb 15, 2025 12:31 AM

ಸಾರಾಂಶ

ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಬಾರದು, ಅದು ಒಂದು ಸಾಮಾಜಿಕ ಜಾಗೃತಿ ಕಳಕಳಿಯ ಸಂದೇಶವನ್ನು ನೀಡುವಂತಹ ಅತ್ಯುತ್ತಮ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕಿದೆ ಎಂದು ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತಪ್ಪ ಈಟಿ ಹೇಳಿದರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಗೆ ತರುವ ಬದಲಿಗೆ ರಾಜ್ಯದಲ್ಲಿ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿಯೆ ಕಡ್ಡಾಯ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಾಗ ಮಾತ್ರ ಕನ್ನಡ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂದು ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತಪ್ಪ ಈಟಿ ಹೇಳಿದರು.

ಪಟ್ಟಣದ ನಿವಾಸದಲ್ಲಿ ''''ಕನ್ನಡಪ್ರಭ'''' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕನ್ನಡ ಉಳಿಸುವ ಕೆಲಸ ಮಾಡುವ ಬದಲಿಗೆ ಪರೋಕ್ಷವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಆರಂಭಿಸುವ ಮೂಲಕ ಪರೋಕ್ಷವಾಗಿ ಆಂಗ್ಲ ಮಾಧ್ಯಮಕ್ಕೆ ಸಹಕಾರ ಕೊಡುತ್ತಿದೆ. ಹೀಗಿದ್ದಾಗ ಕನ್ನಡ ಉಳಿಯಲು ಹೇಗೆ ಸಾಧ್ಯ? ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಬಾರದು, ಅದು ಒಂದು ಸಾಮಾಜಿಕ ಜಾಗೃತಿ ಕಳಕಳಿಯ ಸಂದೇಶವನ್ನು ನೀಡುವಂತಹ ಅತ್ಯುತ್ತಮ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕಿದೆ. ಸಾರ್ವಜನಿಕರ ಮೇಲೆ ಉತ್ತಮ ಪರಿಣಾಮ ಬೀರುವಂತಹ ಸಮ್ಮೇಳನ ಆಯೋಜನೆ ಮಾಡಬೇಕಿದೆ ಎಂದರು.

ನಮ್ಮ ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಬದುಕು ಕಟ್ಟಿಕೊಡುವಂತಹ ಬದುಕಿನ ಭಾಷೆಯಾಗಿದೆ. ಆದರೆ ಇಂಗ್ಲಿಷ್‌ ವ್ಯಾಮೋಹಕ್ಕೆ ಬಲಿಯಾಗುವ ಮೂಲಕ ಮೂಲ ಕನ್ನಡವನ್ನೇ ಮರೆಯುತ್ತಿದ್ದೇವೆ. ಇದು ವಿಪರ್ಯಾಸದ ಸಂಗತಿ. ಹೆಸರಿಗೆ ಮಾತ್ರ ಹೋರಾಟಗಳನ್ನು ಮಾಡದೆ ನೆಲ, ಜಲ, ಭಾಷೆ ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಸರ್ಕಾರ ಸಹಕಾರ ಕೊಡಬೇಕು ಎಂದರು.

ಕನ್ನಡದ ಕಾರ್ಯಕ್ರಮಗಳು ಸರ್ಕಾರಿ ಶಾಲೆಯಲ್ಲಿ, ಮನೆ ಮನೆಗಳಲ್ಲಿ, ನಡೆಸುವಂತಹ ವ್ಯವಸ್ಥೆಯನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ. ಸರ್ಕಾರಿ ನೌಕರರು ನೌಕರಸ್ಥ ಎನ್ನುವ ಅಹಂ ಬಿಟ್ಟು ತನ್ನ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಕಳುಹಿಸಬೇಕು. ಕನ್ನಡ ಶಾಲೆಯಲ್ಲಿ ಶಿಕ್ಷಕರು ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕನ್ನಡ ಓದಲು, ಬರೆಯಲು ಬರುತ್ತದೆ, ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಕನ್ನಡ ಶಾಲಾ ಶಿಕ್ಷಕರಿಗೆ ಶಿಕ್ಷಣ ಮಾತ್ರ ಕಲಿಸುವ ಜವಾಬ್ದಾರಿ ನೀಡಬೇಕೇ ಹೊರತು ಹಲವು ಜವಾಬ್ದಾರಿಗಳನ್ನು ಹೊರಿಸಿದರೆ ಅವರು ಮಕ್ಕಳಿಗೆ ಯಾವಾಗ ಪಾಠ ಮಾಡಬೇಕು? ಭಾಷಾ ಅಬಿವೃದ್ಧಿ ಯಾವಾಗ ಆಗಬೇಕು? ಜವಾಬ್ದಾರಿ ನಿಭಾಯಿಸುವುದಕ್ಕಾಗಿಯೆ ಸರ್ಕಾರ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಈಟಿ ಹೇಳಿದರು.

ನಾವು ಕನ್ನಡ ಉಳಿಸಿಕೊಳ್ಳುವ ಜತೆಗೆ ಭೂಮಿ ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಸೌಲಭ್ಯಗಳು ನೀಡುವ ಭರದಲ್ಲಿ ವಿಂಡ್‌ ಪವರ್ ಕಂಪನಿಗಳು, ಸೋಲಾರ ಕಂಪನಿಗಳು, ರೈಲ್ವೆ ಕಾಮಗಾರಿಗಳು ಸೇರಿದಂತೆ ಅನೇಕ ಕಾರ್ಯ ಚಟುವಟಿಕೆಗೆ ಫಲವತ್ತಾದ ಭೂಮಿ ಮಾರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರ ಎಲ್ಲಿ ಉತ್ಪಾದನೆ ಮಾಡಬೇಕು? ಆಹಾರ ಇಲ್ಲದೆ ಸಾಯುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಭೂಮಿ ಮಾರಾಟ ಮಾಡುವುದು ಕಡಿಮೆ ಮಾಡಬೇಕು. ಸೌಲಭ್ಯ ಪಡೆಯಲು ಮಾರ್ಗಗಳನ್ನು ಕಂಡು ಹಿಡಿಯಬೇಕು ಎಂದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ನಮ್ಮ ಭಾಗದಲ್ಲಿ ಸೋಲಾರ್‌, ವಿಂಡ್ ಪವರ್, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ನಮ್ಮ ಭಾಗದವರೆ ಆಗಿರಬೇಕು. ಇಲ್ಲವಾದರೆ ವಲಸೆ ಬಂದವರ ಜತೆಯಲ್ಲಿ ವ್ಯವಹಾರ ಮಾಡುತ್ತಾ ನಮ್ಮ ಭಾಷೆಯನ್ನು ನಾವು ಮರೆಯುವಂತಹ ಸ್ಥಿತಿ ಬರಲಿದೆ ಎಂದರು. ಈಗ ಬಹುತೇಕ ಹಳ್ಳಿ ಪ್ರದೇಶಗಳಲ್ಲಿ ಮಾತ್ರ ನಾವು ಕನ್ನಡವನ್ನು ಕಾಣಬಹುದಾಗಿದೆ. ಪಟ್ಟಣದಲ್ಲಿ ಕನ್ನಡ ಮರೆಯಾಗುತ್ತಿದೆ ಹಾಗೂ ಸರ್ಕಾರಿ ಕಾರ್ಯಾಲಯಗಳಲ್ಲಿ ಕನ್ನಡದ ನಾಮಫಲಕಗಳು ಕಡಿಮೆಯಾಗುತ್ತಿವೆ ಎಂದರು.

ರಾಜಕಾರಣದಿಂದ ವ್ಯವಸ್ಥೆ ಅವನತಿಯತ್ತ ಹೊರಟಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಾಗುತ್ತಿಲ್ಲ. ನಮ್ಮಲ್ಲಿ ಐದು ನದಿಗಳು ಇದ್ದರೂ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ರಾಜಕಾರಣಿಗಳು ಗಟ್ಟಿಮನಸ್ಸು ಮಾಡಿ ಗಟ್ಟಿ ಧ್ವನಿಗಳ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸೇವಾ ಸಂಸ್ಥೆಯಾಗಿದೆಯೇ ಹೊರತು ಇದು ದುಡ್ಡು ಮಾಡುವ, ಸ್ವಾರ್ಥಕ್ಕಾಗಿ ಉಪಯೋಗ ಮಾಡಿಕೊಳ್ಳುವಂತಹ ಪರಿಷತ್‌ ಅಲ್ಲ. ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಸಾಹಿತ್ಯಾತ್ಮಕ ಚಟುವಟಿಕೆ ಮಾಡಿದಾಗ ಮಾತ್ರ ಪರಿಷತ್ತಿಗೆ ಒಳ್ಳೆಯ ಹೆಸರು ತಂದುಕೊಡಲು ಸಾಧ್ಯವಿದೆ ಹಾಗೂ ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಸಾಗುವಂತಹ ನಿರ್ಣಯಗಳ ಈಡೇರಿಕೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಕಟಿಬದ್ಧವಾಗಿ ಕೆಲಸ ಮಾಡಬೇಕು ಎಂದರು.

ಸಮ್ಮೇಳನಾಧ್ಯಕ್ಷ ಪರಿಚಯ: ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಗ್ರಾಮದವರಾದ ಹನುಮಂತಪ್ಪ ಯಲ್ಲಪ್ಪ ಈಟಿ ಅವರು ಮಾ. 3, 1943ರಂದು ಜನಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 1968ರಿಂದ 2001ರ ವರೆಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಸಿಡಿಪಿಒ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರ ಸಾಹಿತ್ಯ ಕ್ಷೇತ್ರ, ಸಾಮಾಜಿಕ ಚಟುವಟಿಕೆ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 30 ವರ್ಷಗಳಿಂದ ಕುಷ್ಟಗಿಯಲ್ಲಿ ಇದ್ದಾರೆ.

ಸಾಹಿತ್ಯ: ನಮ್ಮೊಳಗೆ ನೀವು ನಿಮ್ಮೊಳಗೆ ನಾವು, ಹದವರಿತು ಬಾಳು, ಬೆಳಕಿನೆಡೆಗೆ, ಮಧುರ ಬಾಳಿಗಾಗಿ ದಾರಿದೀಪಗಳು, ಕಾಮನಬಿಲ್ಲು. ಅಂಕೋಲಾದಲ್ಲಿ-ಅರಿವಿನೆಡೆಗೆ, ಕಲ್ಬುರ್ಗಿಯಲ್ಲಿ-ಹೊಂಬೆಳಕು, ಹುಬ್ಬಳ್ಳಿಯಲ್ಲಿ-ಹೂಬಳ್ಳಿ, ಬೀಳಗಿಯಲ್ಲಿ-ಬೆಳ್ಳಿಚುಕ್ಕಿ, ಕುಷ್ಟಗಿಯಲ್ಲಿ ಕುಸುಮ, ಕುಷ್ಟಗಿಯಲ್ಲಿ-ಮಹರ್ಷಿ ವಾಲ್ಮೀಕಿ ಹೀಗೆ ವಿವಿಧ ಗ್ರಂಥ ರಚಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ ಫೆಲೋಶಿಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದೇಹದಾನ ಮಾಡಲು 2016ನೇ ಸಾಲಿನಲ್ಲಿ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ.

Share this article