ಶಿಕ್ಷಕರು ಯೋಜನೆ ಸಿದ್ದಪಡಿಸಿ ಬೋಧನೆ ಮಾಡಲಿ

KannadaprabhaNewsNetwork | Published : Jul 14, 2024 1:37 AM

ಸಾರಾಂಶ

ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿದರು.

ಆಂಗ್ಲ ಭಾಷಾ ಕಾರ್ಯಾಗಾರದಲ್ಲಿ ಬಿಇಒ ಹನುಮಂತಪ್ಪ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಶಿಕ್ಷಕರು ಪಾಠ ಯೋಜನೆ ಸಿದ್ದಪಡಿಸಿ ಅಧ್ಯಯನ ಮಾಡಿ ಪಾಠ ಮಾಡಲು ಏನು ತೊಂದರೆ ? ಅವರಿಗೆ ಅರಿವು ಬೇಡವೇ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಕಠೋರ ನುಡಿಗಳಾಡಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜ್‌ನ ಪ್ರೌಢ ಶಾಲೆಯಲ್ಲಿ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಿಗೆ ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿ ಹರಿಹರ ತಾಲೂಕಿನಲ್ಲಿ ಜು.15ರವರೆಗೆ ವಿವಿಧ ವಿಷಯಗಳಲ್ಲಿ ಶಿಕ್ಷಣ ಇಲಾಖೆ ಕಾರ್ಯಾಗಾರ ನಡೆಸುತ್ತಿದೆ, ಆದರೂ ಕೆಲವು ಶಿಕ್ಷಕರು ಗೈರಾಗಿದ್ದಾರೆ, 25 ವರ್ಷಗಳ ಸೇವಾನುಭವ ಹೊಂದಿದ ಶಿಕ್ಷಕರಿಂದ ಏನು ನಿರೀಕ್ಷಿಸಲು ಸಾಧ್ಯವೆಂದು ಕೆಂಡಾಮಂಡಲವಾದರು.

ಇಲಾಖೆಯ ಮಾರ್ಗಸೂಚಿ ಮತ್ತು ಪಠ್ಯ ಪುಸ್ತಕ ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಕಲಿಸಲು ಸಾಧ್ಯವಿಲ್ಲ ಎಂದಾದರೆ, ಇವರಿಗೆ ಜವಾಬ್ದಾರಿಯ ಪಾಠ ಮಾಡಬೇಕಿದೆ, ಇಂತಹ ಕಾರ್ಯಾಗಾರಕ್ಕೆ ಕೆಲವು ಶಾಲೆಗಳು ಶಿಕ್ಷಕರನ್ನು ನಿಯೋಜಿಸಲು ತಾತ್ಸಾರ ಮಾಡುತ್ತಿದ್ದು ಇಲಾಖೆಯಿಂದ ಹಕ್ಕನ್ನು ಕೇಳುವ ಇವರುಗಳು ಕರ್ತವ್ಯ ಮಾಡಬೇಕು ಎಂದು ಆದೇಶಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ಮಹಾರಾಷ್ಟ್ರದ ಪ್ರಶ್ನೆ ಪತ್ರಿಕೆ ನೀಡಿಲ್ಲ, ಟಾಪ್ ಶಾಲೆ ಅಂತಾ ಜಂಭದಿಂದ ಹೇಳುವವರೇ ಉತ್ತಮ ಫಲಿತಾಂಶ ತಂದಿಲ್ಲ, ಶೈಕ್ಷಣಿಕ ಬಲವರ್ಧನೆಗೆ ಶಿಕ್ಷಕರು ರಚನಾತ್ಮಕ ಕಾರ್ಯಗಳನ್ನು ಮಾಡಲು ಪಾಠ ಯೋಜನೆ ಸಿದ್ದಪಡಿಸಲು ಹಿಂದೇಟು ಹಾಕುವುದು ಕಂಡು ಬಂದಿದೆ, ಕಾರ್ಯಾಗಾರಕ್ಕೆ ಗೈರಾದ ಶಿಕ್ಷಕರಿಗೆ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪ ಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್ ಮಾತನಾಡಿ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಶುಲ್ಕ ಹೆಚ್ಚಾಗಿದೆ ಎಂದು ಕೆಲವರು ಪರೀಕ್ಷೆ ತೆಗೆದುಕೊಂಡಿಲ್ಲ, ಆ ಶುಲ್ಕ ಭರಿಸಿ ಪ್ರವೇಶ ಪತ್ರ ನೀಡಿದರೂ ಪಡೆದಿಲ್ಲ ಎಂದು ಪೋಷಕರ ಸ್ಥಿತಿ ತಿಳಿಸಿದರು.

ಈ ವೇಳೆ ಎಸ್‌ಡಿಎಂಸಿ ಸದಸ್ಯರಾದ ಸದಾನಂದ, ಮಂಜುನಾಥ್, ಮುಖ್ಯ ಶಿಕ್ಷಕ ಹನುಮಂತಪ್ಪ, ಜಯಪ್ಪ, ಇಂಗ್ಲೀಷ್ ಶಿಕ್ಷಕ ಸುರೇಶ್ ಮೂಲಿಮನಿ, ಬಾಲರಾಜ್, ಸದಾಶಿವ, ರೇವಣಸಿದ್ದಪ್ಪ ಅಂಗಡಿ, ಸಂಪನ್ಮೂಲ ವ್ಯಕ್ತಿ ನಾಗರಾಜ್ ವಿವಿಧ ಶಾಲೆಗಳ ಹಲವು ಶಾಲೆಗಳ ಶಿಕ್ಷಕರು ಇದ್ದರು.

Share this article