ಶಿಕ್ಷಕರು ಸಮಾಜ ಸ್ಮರಿಸುವಂತೆ ಸೇವೆ ಸಲ್ಲಿಸಲಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork | Published : Sep 6, 2024 1:07 AM

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ, ತಂತ್ರಜ್ಞಾನ, ಅವಿಷ್ಕಾರ ಬಂದರೂ ಇಂದು ಶಿಕ್ಷಣದ ಗುಣಮಟ್ಟವು ತೀರಾ ಕುಸಿದಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಶಿಕ್ಷಕರು ಬರೀ ವಿದ್ಯಾರ್ಥಿಗಳು ವಿದ್ಯಾರ್ಥಿಗಳಲ್ಲದೇ ಸಮಾಜ ಸ್ಮರಿಸುವಂತೆ ಸೇವೆ ಸಲ್ಲಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಗುರುವಾರ ಪಟ್ಟಣದ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಳಿಯಾಳ ಮತ್ತು ದಾಂಡೇಲಿ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದ ಸೇವೆಯಾಗಿದ್ದು, ಶಿಕ್ಷಕರಿಗೆ ಈ ಹಿಂದೆ ಸಮಾಜವು ನೋಡುತ್ತಿದ್ದ ದೃಷ್ಟಿಕೋನವು ಇದೀಗ ಬದಲಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ, ತಂತ್ರಜ್ಞಾನ, ಅವಿಷ್ಕಾರ ಬಂದರೂ ಇಂದು ಶಿಕ್ಷಣದ ಗುಣಮಟ್ಟವು ತೀರಾ ಕುಸಿದಿದೆ. ಶಿಕ್ಷಕರು ತಾವು ಪಡೆದ ಶಿಕ್ಷಣ ಹೇಗಿತ್ತು, ಆ ಗುಣಮಟ್ಟದಲ್ಲಿಯೇ ಈಗ ಅವರು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆಯೇ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಸನ್ಮಾನ: ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಹಾಗೂ ಸೇವಾ ನಿವೃತ್ತರಾದವರನ್ನು ಸನ್ಮಾನಿಸಲಾಯಿತು. ಶಿಕ್ಷಕರ ವಿವಿದ ಬೇಡಿಕೆಗಳಿಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ ಮನವಿಯನ್ನು ಸಲ್ಲಿಸಿದರು. ದಾಂಡೇಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಅಹ್ಮದ್, ಉಪಾಧ್ಯಕ್ಷೆ ಶಿಲ್ಪಾ ಖೋಡೆ, ಹಳಿಯಾಳ ಪುರಸಭೆಯ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸದಸ್ಯರಾದ ಫಯಾಜ್ ಶೇಖ್, ಸುವರ್ಣ ಮಾದರ, ಶಮೀಮಬಾನು ಜಂಬೂವಾಲೆ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಪ್ರಭಾರ ಇಒ ಸತೀಶ್ ಆರ್., ಬಿಇಒ ಪ್ರಮೋದ ಮಹಾಲೆ, ಸಿಪಿಐ ಜಯಪಾಲ್ ಪಾಟೀಲ, ಕಾಂಗ್ರೆಸ್ ಮುಖಂಡರಾದ ಕೃಷ್ಣ ಪಾಟೀಲ, ಸುಭಾಸ್ ಕೊರ್ವೆಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಹಾಗೂ ಇತರರು ಇದ್ದರು.

ನಿವೃತ್ತ ಉಪನ್ಯಾಸಕ ಸುರೇಶ ಕಡೆಮನಿ ಅವರು ಉಪನ್ಯಾಸ ನೀಡಿದರು. ಪಿಎಸ್ಐ ವಿನೋದ ರೆಡ್ಡಿಯವರು ಶಾಲೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಶಿಕ್ಷಕರಿಗೆ ಮಾಹಿತಿಯನ್ನು ನೀಡಿದರು.

Share this article