ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಶ್ರಮಿಸಲಿ

KannadaprabhaNewsNetwork | Published : Sep 13, 2024 1:36 AM

ಸಾರಾಂಶ

ಪ್ರತಿಭೆಗೆ ನೀರೆರೆಯುವ ಕಾರ್ಯ ಗುರುಬಳಗದಿಂದ ನಿರಂತರವಾಗಿ ನಡೆಯುತ್ತಿದೆ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಶಿಕ್ಷಕರ ಪ್ರೋತ್ಸಾಹ ಸದಾ ಇರಬೇಕು

ಶಿರಹಟ್ಟಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವವರೇ ನಿಜವಾದ ಶಿಕ್ಷಕ. ಶಿಕ್ಷಕರು ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಬಿತ್ತುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಪ್ರಶಸ್ತಿಗಳು ಅರಸಿ ಬರಲು ಸಾಧ್ಯ ಎಂದು ಎಫ್.ಎಂ. ಡಬಾಲಿ ಹೈಸ್ಕೂಲ್‌ನ ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ ಹೇಳಿದರು.

ಪಟ್ಟಣದ ಎಫ್.ಎಂ. ಡಬಾಲಿ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಗಜಾನನೋತ್ಸವ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಎಂ.ಕೆ. ಲಮಾಣಿ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದಿರುವ ಸುನಿಲ್ ಲಮಾಣಿ ಅವರನ್ನು ಗೌರವಿಸಿ ಮಾತನಾಡಿದರು.

ಉತ್ತಮ ಶಿಕ್ಷಕರಾಗಲು ಸಮಚಿತ್ತ, ಅದಮ್ಯ ಒಲವು, ಅನ್ವೇಷಣಾ ಮನೋಭಾವ, ನಿತ್ಯ ಪೂರ್ವ ಸಿದ್ಧತೆ, ಸಹಾನುಭೂತಿ, ನಿರಂತರ ಕಲಿಕೆ, ಸೃಜನಶೀಲತೆ, ತಾಳ್ಮೆಯಿಂದ ಆಲಿಸುವಿಕೆ ಮತ್ತು ವಿಶೇಷ ತಿಳಿವಳಿಕೆ ಈ ಎಲ್ಲ ಗುಣಲಕ್ಷಣಗಳನ್ನು ಶಿಕ್ಷಕರು ಹೊಂದಿರಬೇಕು ಎಂದರು.

ಪಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ ಮಾತನಾಡಿ, ಎಫ್.ಎಂ. ಡಬಾಲಿ ಬಾಲಕ, ಬಾಲಕಿಯರ ಪ್ರೌಢಶಾಲೆಯಲ್ಲಿ ನಿರಂತರವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಪ್ರತಿಭೆಗೆ ನೀರೆರೆಯುವ ಕಾರ್ಯ ಗುರುಬಳಗದಿಂದ ನಿರಂತರವಾಗಿ ನಡೆಯುತ್ತಿದೆ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಶಿಕ್ಷಕರ ಪ್ರೋತ್ಸಾಹ ಸದಾ ಇರಬೇಕು. ಈ ಕಾರ್ಯವನ್ನು ಸಂಸ್ಥೆಯ ಶಿಕ್ಷಕ ಬಳಗ ಮಾಡುತ್ತಿರುವುದರಿಂದಲೇ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ಸಂತಸದ ಸಂಗತಿ ಎಂದರು.

ಶಾಲೆಯ ನಿವೃತ್ತ ಶಿಕ್ಷಕರಾದ ಎಸ್.ಎಸ್. ಪಾಟೀಲ, ಎಸ್.ಎನ್. ಕುಂದಿ ಅವರನ್ನು ಗೌರವಿಸಲಾಯಿತು. ಪಪಂ ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಯುವ ಮುಖಂಡ ಅಜ್ಜು ಪಾಟೀಲ, ವಿ.ವಿ. ಅಮರಶೆಟ್ಟಿ, ಸುಧಾ ಹುಚ್ಚಣ್ಣವರ, ಆರ್.ಎಂ. ಬಟಗುರ್ಕಿ, ಜಿ.ಕೆ. ಕರಕಣ್ಣವರ, ನೌಶಾದ ಶಿಗ್ಲಿ, ಎಂ.ಎಂ. ನದಾಫ್, ರೇಣುಕಾ ಜಗಂಡಬಾವಿ, ಎನ್. ಹನಮರಡ್ಡಿ, ಪಿ.ಎನ್. ಕುಲಕರ್ಣಿ, ಎನ್.ಆರ್. ಉಡಚಗೊಂಡ, ವೈ.ಎಸ್. ಪಂಗಣ್ಣವರ ಉಪಸ್ಥಿತರಿದ್ದರು.

Share this article