ಜಿಲ್ಲಾ 20ನೇ ಮಕ್ಕಳ ಸಾಹಿತ್ಯ ಸಮ್ಮೇಳನ । ಮಾತೃಭಾಷೆ ಪರಿಪೂರ್ಣತೆ ನಂತರ ಅನ್ಯ ಭಾಷೆ ಕಲಿಕೆ
ಸರ್ವೋದಯ, ಸಮನ್ವಯದಂತಹ ವಿಶ್ವಮಾನವ ತತ್ವಗಳು ಬಾಲ್ಯದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ಜಿಲ್ಲಾ 20ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಬಿ.ಬಿಂದು ಕರೆ ನೀಡಿದರು.
ಸರ್ವೋದಯ, ಸಮನ್ವಯದಂತಹ ವಿಶ್ವಮಾನವ ತತ್ವಗಳು ಬಾಲ್ಯದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ಜಿಲ್ಲಾ 20ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಬಿ.ಬಿಂದು ಕರೆ ನೀಡಿದರು. ಶಿವಮೊಗ್ಗದಲ್ಲಿ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಮಕೃಷ್ಣ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಅನುಪಿನಕಟ್ಟೆಯ ರಾಮಕೃಷ್ಣ ಗುರುಕುಲ ಆಶ್ರಮದಲ್ಲಿ ಏರ್ಪಡಿಸಿದ್ದ ಜಿಲ್ಲಾ 20ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸೀಮಿತತೆಯ ಚಿಂತನೆಗಳು ಬಾಲ್ಯದ ಮನಸ್ಸುಗಳನ್ನು ಕಾಡದಿರಲಿ. ವಿಶ್ವಮಾನವ ತತ್ವಗಳು ಅಂತಹ ಸೀಮಿತತೆಗಳಿಂದ ಹೊರಬರಲು ಪ್ರೇರೇಪಿಸುತ್ತವೆ. ಸಾಹಿತ್ಯ, ಸಂಸ್ಕೃತಿ, ಜನಪದ ತನ್ನದೇ ಆಶಯಗಳನ್ನು ಹೊಂದಿದೆ. ಅಂತಹ ಆಶಯಗಳು ನಮಗೆ ಸಿಕ್ಕ ಬಹುದೊಡ್ಡ ಆದರ್ಶ. ಅಂತಹ ಆದರ್ಶಗಳು ಸಾಕಾರಗೊಳ್ಳಲು ನಮ್ಮ ಮನೆ, ಊರು, ಶಾಲೆಯ ವಾತಾವರಣ ಸದಾ ಕ್ರಿಯಾಶೀಲವಾಗಿರಬೇಕು ಎಂದು ಹೇಳಿದರು.
ರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಹಾಗೂ ಶಿವಮೊಗ್ಗ ತಾಲೂಕು ಮಕ್ಕಳ ಸಮ್ಮೇಳನದ ಸರ್ವಾಧ್ಯಕ್ಷೆ ನೇಹಾ ಹೊನ್ನಾನಿ ಮಾತನಾಡಿ, ಭಾಷಾಭಿಮಾನವನ್ನು ಬೆಳೆಸಲು ಹಾಗೂ ಮಕ್ಕಳ ಸಾಹಿತ್ಯಾತ್ಮಕ ಚಿಂತನೆಗಳನ್ನು ಪ್ರಸ್ತುತಪಡಿಸಲು ಸಾಹಿತ್ಯ ಸಮ್ಮೇಳನದ ವೇದಿಕೆಗಳು ಪೂರಕವಾಗಿ ನಿಂತಿವೆ. ಮಕ್ಕಳಾದ ನಾವು ಕನ್ನಡ ಭಾಷೆಯನ್ನು ಪ್ರೀತಿಸುವ, ಸ್ಪಷ್ಟವಾಗಿ ಓದುವ, ಬರೆಯುವ, ನಿರರ್ಗಳವಾಗಿ ಮಾತನಾಡುವ ಕೌಶಲ್ಯತೆಗಳನ್ನು ಬೆಳಿಸಿಕೊಳ್ಳಬೇಕಿದೆ. ಮಕ್ಕಳಾದ ನಾವು ಮೊಬೈಲ್‌ಗೆ ಸೀಮಿತರಾಗದೆ, ವಿದ್ಯಾರ್ಜನೆಯ ಜೊತೆಯಲ್ಲಿ ಸಣ್ಣ ಕಥೆಗಳನ್ನು ಓದುವ, ಕವನ ಚುಟುಕುಗಳನ್ನು ರಚಿಸುವ ಕ್ರಿಯಾಶೀಲತೆಯಲ್ಲಿ ಮಗ್ನರಾಗುವ ಮೂಲಕ ವಿದ್ಯಾರ್ಥಿ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳೊಣ ಎಂದರು.
ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಆರ್.ನಾಗೇಶ್, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಅನನ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಅನನ್ಯ ಗಿರೀಶ್, ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ರಾಮಕೃಷ್ಣ ಗುರುಕುಲ ಆಶ್ರಮದ ಮುಖೋಪಾಧ್ಯಾಯ ಎ.ವೆಂಕಟೇಶ್ ಇತರರು ಭಾಗವಹಿಸಿದ್ದರು.