ಕನ್ನಡಪ್ರಭ ವಾರ್ತೆ ಧಾರವಾಡ
ಜೆಎಸ್ಸೆಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದಲ್ಲಿ ಪತ್ರಕರ್ತ ರಾಹುಲ್ ಬೆಳಗಲಿ ಅವರ ಪ್ರಶ್ನೆಗೆ ಡಾ. ಕೆ.ಎಸ್. ಶರ್ಮಾರ ಉತ್ತರಗಳಿವು. ಯುವಕರಿಗೆ ನಿಮ್ಮ ಸಂದೇಶ ಏನು? ಎಂಬ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಪ್ರಶ್ನೆಗೆ, ಯುವ ಬರಹಗಾರರು ಹೊಸತನ ಕಂಡುಕೊಳ್ಳದೇ ಭವಿಷ್ಯ ಕಟ್ಟಿಕೊಳ್ಳುವುದು ಅಸಾಧ್ಯ. ಯುವಕರು ವ್ಯವಸ್ಥೆ ವಿರುದ್ಧ ಸೈನಿಕರಾಗಲು ಮುಂದೆ ಬರಬೇಕು ಎಂದರು.
ಮಾರ್ಕ್ಸವಾದಿಗಳಾದ ನೀವು ಸಮಾಧಿ ಪೂಜೆ ಮಾಡುವಿರಾ? ಎಂಬ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಪ್ರಶ್ನೆಗೆ, ನಾಯಿ ನನ್ನ ಆತ್ಮೀಯ ಸ್ನೇಹಿತ. ಅದರ ನೆನಪಿಗೆ ಸಮಾಧಿ ನಿರ್ಮಿಸಿದೆ ಅಷ್ಟೇ. ಅದು ಪೂಜೆಗೆ ಅಲ್ಲ ಎಂಬುದು ಶರ್ಮಾ ಉತ್ತರ. ಮದುವೆ ಆಗದ ಬಗ್ಗೆ ತಡವಾಗಿ ಪ್ರಶ್ನೆ ಕೇಳಿದ್ದೀರಿ. ನಾನೊಬ್ಬನು ಮದುವೆ ಆಗದಿದ್ದರೆ, ಜನಸಂಖ್ಯೆ ಹೆಚ್ಚಳ ನಿಂತಿದೆಯೇ? ಎಂದ ಶರ್ಮಾ, ತತ್ವ- ಸಿದ್ಧಾಂತಕ್ಕೆ ಬದ್ಧ ವ್ಯಕ್ತಿಗಳು, ಸಮಾಜದ ಕೆಲಸಕ್ಕೆ ಮದುವೆ ಆಗದಿರುವುದೇ ಒಳೆಯದು ಎಂದು ಮಾರ್ಮಿಕವಾಗಿ ಉತ್ತರಿಸಿದರು.ದೇಶದ ಆಡಳಿತ ವ್ಯವಸ್ಥೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಭಾರತದ ಕೆಲವು ಕೆಟ್ಟ ಪರಂಪರೆ, ಸಂಸ್ಕೃತಿಗಳು ನಿರ್ನಾಮ ಆಗುವ ವರೆಗೆ ದೇಶ ಬದಲಾಗಲ್ಲ. ಹೀಗಾಗಿ ದೇಶದಲ್ಲಿ ಸಾಂಸ್ಕೃತಿಕ ಕ್ರಾಂತಿ ಮೊದಲಾಗಲಿ ಎಂದು ಆಶಿಸಿದರು.
ಗೋಷ್ಠಿಯಲ್ಲಿ ಮಹಾದೇವ ಹೊರಟ್ಟಿ, ಡಾ. ವಿಶ್ವನಾಥ ಕೋಟಿ, ಮೋಹನ ಲಿಂಬಿಕಾಯಿ, ಶಿವಾನಂದ ಬನ್ನಿಗೋಳ, ಜಯಪ್ರಕಾಶ ಟೆಂಗಿನಕಾಯಿ, ರಾಹುಲ್ ಬೆಳಗಲಿ ಇದ್ದರು. ಎಸ್.ಜಿ. ಹಿರೇಮಠ ಸ್ವಾಗತಿಸಿದರು. ವೈ.ಎಸ್. ಬೆಣ್ಣಿ ನಿರೂಪಿಸಿದರು. ಶ್ರೀನಿವಾಸ ನವೀಂದ್ರಕರ ವಂದಿಸಿದರು.