ಡಾ. ಬಾಬು ಜಗಜೀವನರಾಂ ಜೀವನ ಸಾಧನೆ ಯುವಪೀಳಿಗೆಗೆ ತಿಳಿಯಲಿ: ಪ್ರಶಾಂತಕುಮಾರ್ ಮಿಶ್ರಾ

KannadaprabhaNewsNetwork | Published : Apr 6, 2025 1:46 AM

ಸಾರಾಂಶ

ಬಳ್ಳಾರಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಸಭಾಂಗಣದಲ್ಲಿ ಶನಿವಾರ ಡಾ. ಬಾಬು ಜಗಜೀವನ್ ರಾಮ್ 118ನೇ ಜಯಂತಿ ಅಂಗವಾಗಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಪುಷ್ಪಾರ್ಚನೆ ಮಾಡಿದರು.

ಬಳ್ಳಾರಿ: ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನ ಮಂತ್ರಿಗಳಾದ ಡಾ. ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ 118ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರ ಜನ್ಮ ವಾರ್ಷಿಕೋತ್ಸವವನ್ನು ಏ. 5ರಂದು ಪ್ರತಿವರ್ಷ ಆಚರಿಸುತ್ತೇವೆ. ಪರಿಶಿಷ್ಟ ಜಾತಿಗಳಂತಹ ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಗಮನಾರ್ಹ ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿಯಾಗಿದ್ದರು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜಮುಖಿ ಚಿಂತಕ ಬಿ. ಶ್ರೀನಿವಾಸ ಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಡಾ. ಬಾಬು ಜಗಜೀವನ್ ರಾಮ್ ಅವರು 1908ರ ಏ. 5ರಂದು ಬಿಹಾರ್‌ನ ಚಾಂದ್ವಾ ಗ್ರಾಮದಲ್ಲಿ ಜನಿಸಿದರು. 1935ರಲ್ಲಿ ದಲಿತರಿಗೆ ಸಮಾನತೆಯನ್ನು ಸಾಧಿಸಲು ಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು 1937ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು. ನಂತರ, ಅವರು ಗ್ರಾಮೀಣ ಕಾರ್ಮಿಕ ಚಳವಳಿಯನ್ನು ಸಂಘಟಿಸಿದರು ಎಂದು ತಿಳಿಸಿದರಲ್ಲದೆ, ಡಾ. ಬಾಬು ಜಗಜೀವನರಾಂ ಅವರ ಜೀವನಕ್ರಮ ಹಾಗೂ ನಡೆದು ಬಂದ ಹಾದಿಯ ಕುರಿತು ವಿವರಿಸಿದರು.

ಚಿಗುರು ಕಲಾತಂಡದವರು ಡಾ. ಬಾಬು ಜಗಜೀವನ್ ರಾಂ ಅವರ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಿದರು. ಜಯಂತಿಯ ಅಂಗವಾಗಿ ಕರ್ನಾಟಕ ರಾಜ್ಯ ಡಾ. ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಡಾ. ಬಾಬು ಜಗಜೀವನ್ ರಾಮ್ ಜಯಂತಿಯ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರು ಫಲಾನುಭವಿಗಳಿಗೆ ಆಧುನಿಕ ಚರ್ಮಕಾರರ ಪಾದುಕೆ ಕುಟೀರಗಳನ್ನು ವಿತರಣೆ ಮಾಡಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕರ್ನಾಟಕ ರಾಜ್ಯ ಡಾ. ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಟಿ. ಪಂಪಾಪತಿ, ದಲಿತ ಸಮಾಜದ ಹಿರಿಯ ಮುಖಂಡ ಎಲ್. ಮಾರೆಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಮುನ್ನ ಡಾ. ಬಾಬು ಜಗಜೀವನರಾಂ ಭಾವಚಿತ್ರದ ಮೆರವಣಿಗೆ ಜರುಗಿತು. ವಿವಿಧ ಸಾಂಸ್ಕೃತಿ ಕಲಾ ತಂಡಗಳು ಭಾಗವಹಿಸಿದ್ದವು.

Share this article