ವನ್ಯಜೀವಿಗಳ ಉಳಿವಿಗೆ ಯುವಪೀಳಿಗೆ ಸಂಕಲ್ಪ ಮಾಡಲಿ: ನಿರ್ಮಲಾ ಎನ್.ಕೆ.

KannadaprabhaNewsNetwork |  
Published : Oct 11, 2026, 03:30 AM IST
ಕೊಪ್ಪಳದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ವಿಚಾರ ಸಂಕಿರಣ, ಜಾಗೃತಿ ಜಾಥಾ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕೊಪ್ಪಳ ಅರಣ್ಯ ವಿಭಾಗದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ನಗರದ ಓಜನಹಳ್ಳಿ ರಸ್ತೆಯ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ವಿಚಾರ ಸಂಕಿರಣ ಹಾಗೂ ಜಾಗೃತಿ ಸಭೆ ನಡೆಯಿತು.

ಕೊಪ್ಪಳ: ಅರಣ್ಯ ಮತ್ತು ವನ್ಯಜೀವಿಗಳು ಮಾನವನ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದ್ದು, ಅವುಗಳ ಉಳಿವಿಗಾಗಿ ಯುವಪೀಳಿಗೆ ಸಂಕಲ್ಪ ಮಾಡಬೇಕು ಎಂದು ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಎನ್.ಕೆ. ಹೇಳಿದರು.

ಕೊಪ್ಪಳ ಅರಣ್ಯ ವಿಭಾಗದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ನಗರದ ಓಜನಹಳ್ಳಿ ರಸ್ತೆಯ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಕುರಿತು ವಿಚಾರ ಸಂಕಿರಣ ಹಾಗೂ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಡು ಮತ್ತು ಪ್ರಾಣಿಗಳ ನಾಶದಿಂದ ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗಿ ಮನುಕುಲವೇ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ವನ್ಯಜೀವಿ ಸಂರಕ್ಷಣೆ ಅರಣ್ಯ ಇಲಾಖೆಯ ಕರ್ತವ್ಯವಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿಯೇ ಪರಿಸರ ಜಾಗೃತಿ ಬೆಳೆಸಿಕೊಂಡು, ಜೀವವೈವಿಧ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವನ್ಯಜೀವಿ ತಜ್ಞ ಸಮದ್ ಕೊಟ್ಟೂರು ಮಾತನಾಡಿ, ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೊಪ್ಪಳ ಜಿಲ್ಲೆ ವೈವಿಧ್ಯಮಯ ವನ್ಯಜೀವಿ ಸಂಪತ್ತನ್ನು ಹೊಂದಿದ್ದು, ಅವುಗಳ ಸಂರಕ್ಷಣೆಗೆ ಸಾರ್ವಜನಿಕರು ಹಾಗೂ ಯುವಜನರು ಕೈಜೋಡಿಸಬೇಕು ಎಂದು ತಿಳಿಸಿದರು.

ಬಹುಮಾನ ವಿತರಣೆ: ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ ಬಸಿಯಾ ಪೆಂಡಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎಚ್. ಮುಲ್ಲಾ, ಗಾಯತ್ರಿ ಲೋಕಣ್ಣವರ್, ಕಾಲೇಜಿನ ಪ್ರಾಚಾರ್ಯರಾದ ಜ್ಯೋತಿ, ರವೀಂದ್ರ ಜೆ. ಉಪಸ್ಥಿತರಿದ್ದರು. ಮುನಿರಾಬಾದ್ ವಲಯ ಅರಣ್ಯಾಧಿಕಾರಿ ಬಳ್ಳಾರಿ ರಾಘವೇಂದ್ರ ಸ್ವಾಗತಿಸಿ, ವಂದಿಸಿದರು.

ಬೃಹತ್ ಜಾಗೃತಿ ಜಾಥಾ: ಕಾರ್ಯಕ್ರಮಕ್ಕೂ ಮುನ್ನ ಐತಿಹಾಸಿಕ ಶ್ರೀ ಗವಿಮಠದ ಆವರಣದಿಂದ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಯಿತು. ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಗಿದ ಜಾಥಾದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜ್ಞಾನಬಂಧು ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಘೋಷಣೆಗಳನ್ನು ಕೂಗುತ್ತಾ ಕಾರ್ಮಿಕ ವೃತ್ತದ ವರೆಗೆ ಸಾಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲೂ ದೋಸ್ತಿ ಮುಂದುವರಿಯಲಿ!
ಸಂಕಷ್ಟಕ್ಕೆ ಅಂಜದೇ ಆತ್ಮವಿಶ್ವಾಸದಿಂದ ಬದುಕು ಸಾಗಿಸಿ: ಮುರುಳೀಧರ ಹೆಗಡೆ