ಹುಬ್ಬಳ್ಳಿ: ಇಂದಿನ ಯುವಸಮೂಹ ಮೊಬೈಲ್ ಎಂಬ ಗೀಳಿಗೆ ತುತ್ತಾಗಿರುವುದು ನೋವಿನ ಸಂಗತಿ. ಕಲಾವಿದರು, ಹಿರಿಯರು ಸಂಗೀತದ ಕುರಿತು ಯುವಪೀಳಿಗೆಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಭಾರತೀಯ ಜೀವವಿಮಾ ನಿಗಮದ ದಕ್ಷಿಣ ಮಧ್ಯ ವಿಭಾಗದ ವಲಯ ಪ್ರಬಂಧಕ ಎಲ್.ಕೆ. ಶಾಮಸುಂದರ ಹೇಳಿದರು.
ಶುಕ್ರವಾರ ಸಂಜೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ವ್ ಸಹಯೋಗದಲ್ಲಿ ಪಂ. ಕುಮಾರ ಗಂಧರ್ವ ಜನ್ಮಶತಾಬ್ದಿ ಸಂಗೀತೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಐಸಿ ಇಂತಹ ಸಂಗೀತದಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಮಹಾನ್ ಕಲಾವಿದರ ಕುರಿತು ಇಂದಿನ ನಮ್ಮ ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ. ಆದರೆ, ಇಂದಿನ ಯುವ ಪೀಳಿಗೆಯ ಕೈಯಲ್ಲಿ ಮೊಬೈಲ್ ಎಂಬ ಭೂತ ಇದೆ. ರಾತ್ರಿ ಮಲಗುವ ಸಮಯದಲ್ಲೂ ಅದು ನಮ್ಮೊಂದಿಗೆ ಇರಬೇಕು ಎನ್ನುವ ರೀತಿಯಲ್ಲಿದೆ. ಸತ್ತಾಗ ತಲೆ ಹತ್ತಿರ ದೀಪ ಇಟ್ಟಂತೆ ಇಂದು ಮೊಬೈಲ್ ಗಳಾಗಿವೆ. ಅದರಿಂದ ಸ್ವಲ್ಪವಾದರೂ ದೂರ ಇರಬೇಕು.
ಕಳೆದ 65 ವರ್ಷಗಳಿಂದ ಎಲ್‌ಐಸಿ ನಾಲ್ಕನೇ ಅತಿದೊಡ್ಡ ಇನ್ಸುರೆನ್ಸ್ ಕಂಪನಿಯಾಗಿ ಸೇವೆ ಸಲ್ಲಿಸುತ್ತಿದೆ. ಕಳೆದ 3 ತಿಂಗಳಲ್ಲಿ ಶೇ. 75 ಶೇರ್ ಗಳು ಏರಿಕೆ ಕಂಡಿವೆ. ದೇಶದಲ್ಲಿರುವ ಎಲ್ಲ ಸೇವೆಗಳಲ್ಲೂ ಎಲ್ಐಸಿ ಬೆಂಬಲ ನೀಡುತ್ತಿದೆ. ಕೇವಲ ಇನ್ಸುರೆನ್ಸ್ ಅಷ್ಟೇ ಅಲ್ಲದೇ ಸಾಮಾಜಿಕ ಬದ್ದತೆಯಲ್ಲೂ ಎಲ್ಐಸಿ ಮುಂದಿದೆ ಎಂದರು.ಕಾರ್ಯಕ್ರಮದ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಕುಮಾರ ಗಂಧರ್ವ ಅವರು ತಮ್ಮದೇ ರೀತಿಯಲ್ಲಿ ಸಂಗೀತ ಪ್ರಸ್ತುತ ಪಡಿಸಿದ್ದಾರೆ. ಭಾರತೀಯರ ಕಣಕಣದಲ್ಲಿ ಸಂಗೀತ ನಮ್ಮದು. ಅದಕ್ಕೆ ಅಪಾರವಾದ ಶಕ್ತಿ ಇದೆ. ರೋಗಿಗಳಿಗೆ ವೈದ್ಯರು ಹಿಂದೂಸ್ತಾನಿ ಸಂಗೀತ ಆಲಿಸುವಂತೆ ತಿಳಿಸಿರುವ ಉದಾಹಾರಣೆಗಳಿವೆ. ಕ್ಷಮತಾ ಸಂಸ್ಥೆ ಕೇವಲ ಸಂಗೀತ ಅಷ್ಟೇ ಅಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡುತ್ತಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾಜದಿಂದ ಸಮಾಜಕ್ಕಾಗಿ ಎನ್ನುವ ದೇಯೋದ್ದೇಶ ಹೊಂದಿದ್ದು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸಿದ್ಧ ಗಾಯಕರನ್ನು ಕರೆಯಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇಂತಹ ಸುಂದರ ಸಂಗೀತ ಕಾರ್ಯಕ್ರಮದಲ್ಲಿ ಕೇಳುಗರ ಸಂಖ್ಯೆ ಕಡಿಮೆಯಾಗಿರುವುದು ನೋವಿನ ಸಂಗತಿ. ಸಂಗೀತಗಾರರಿಗೆ ಹೆಚ್ಚಿನ ಜನ ಬಂದರೆ ಹೆಚ್ಚಿನ ಸಂತಸವಾಗುತ್ತದೆ. ಎಲ್ಲ ರೀತಿಯ ಪ್ರಚಾರ ನಡೆಸಿದ್ದೇವೆ, ಆದರೂ ಜನ ಬಂದಿಲ್ಲ. ಧಾರವಾಡದಲ್ಲಿ ಮಾಡಿದ್ದರೆ ಸಿಕ್ಕಾಪಟ್ಟಿ ಜನ ಸೇರುತ್ತಿದ್ದರು. ನಾಳೆಯಾದರೂ ಹೆಚ್ಚಿನ ಜನ ಸೇರುವಂತಾಗಲಿ ಎಂದರು.ಪದ್ಮಶ್ರೀ ಪುರಸ್ಕೃತ ಡಾ. ಎಂ.ಎಂ. ಜೋಶಿ ಸೇರಿದಂತೆ ಹಲವರಿದ್ದರು. ಇದೇ ಸಂದರ್ಭದಲ್ಲಿ ವಿದುಷಿ ಯಶಸ್ವಿ ಸರಪೋತದಾರ ಗಾಯನ ಪ್ರಸ್ತುತ ಪಡಿಸಿದರು. ರಾಜೇಂದ್ರ ನಾಕೋಡ ತಬಲಾ, ಸತೀಶ ಭಟ್ ಹಾಮೂರ್ನಿಯಂ, ದಾನೇಶ್ವರಿ ಪಂಡಿತ ಹಾಗೂ ಸೌಧಾಮನಿ ದೇಸಾಯಿ ಸಾಥ್ ನೀಡಿದರು.