ಯುವಕರು ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಆಗು, ಹೋಗುಗಳಿಗೆ ಸ್ಪಂದಿಸಬೇಕಿದೆ. ಜನಜಾಗೃತಿ ಮೂಡಿಸಬೇಕಿದೆ.
ಹಾನಗಲ್ಲ: ದೇಶದ ಸಾಲ ₹210 ಲಕ್ಷ ಕೋಟಿ ತಲುಪಿದೆ. ಇತ್ತೀಚೆಗೆ ಅಮೆರಿಕ ತಳೆದ ನಿಲುವಿನಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಯುವಕರು ವಾಸ್ತವ ಅರಿತು ಅಂತಾರಾಷ್ಟ್ರೀಯ ಷಡ್ಯಂತ್ರಕ್ಕೆ ಬಲಿಯಾಗದೇ ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ ಹಾನಗಲ್ಲಿನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಯುವಕರು ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಆಗು, ಹೋಗುಗಳಿಗೆ ಸ್ಪಂದಿಸಬೇಕಿದೆ. ಜನಜಾಗೃತಿ ಮೂಡಿಸಬೇಕಿದೆ. ಭಾರತೀಯರಲ್ಲಿ ಶಕ್ತಿ, ಸಾಮರ್ಥ್ಯ, ನೈಪುಣ್ಯತೆ ಹೆಚ್ಚಿದೆ. ಆದರೆ ಧರ್ಮ, ಜಾತಿ ಇನ್ನಿತರ ವಿಷಯಗಳ ಕಡೆಗೆ ಗಮನ ಸೆಳೆಯಲಾಗುತ್ತಿದೆ. ಇದರಿಂದ ಆರ್ಥಿಕತೆ ಸುಧಾರಣೆ ಕಡೆಗೆ ಗಮನ ಕಡಿಮೆಯಾಗುತ್ತಿದೆ ಎಂದರು.
ನಮ್ಮ ದೇಶದ ನೆಲೆ ವಿಶಿಷ್ಟವಾದುದು. ಸಾಮರಸ್ಯ, ಸೌಹಾರ್ದತೆಯಿಂದ ಜನ ಬದುಕುತ್ತಿರುವ ಜಗತ್ತಿನ ಏಕೈಕ ರಾಷ್ಟ್ರ ನಮ್ಮದು. ದೇಶದ ಇತಿಹಾಸ ಅರಿತು ಸಾಗಬೇಕಿದೆ ಎಂದು ಹೇಳಿದ ಅವರು, ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಬೇಕಿದೆ. ಸ್ವಚ್ಛತೆ ವಿಚಾರದಲ್ಲಿ ಪ್ರತಿಯೊಬ್ಬರೂ ಕಳಕಳಿ ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಿ ಎಂದರು.ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳೊಂದಿಗೆ ಶಾಸಕ ಮಾನೆ ಶ್ರಮದಾನದಲ್ಲಿ ಪಾಲ್ಗೊಂಡರು. ಬಳಿಕ ಗ್ರಾಮಸ್ಥರ ಕುಂದು, ಕೊರತೆ ಆಲಿಸಿ, ಸ್ಪಂದಿಸಿದರು.ಗ್ರಾಪಂ ಅಧ್ಯಕ್ಷೆ ಯಂಕಮ್ಮ ಬಂಡಿವಡ್ಡರ, ಸದಸ್ಯ ರೆಹೆಮತ್ ನೆಲ್ಲಿಕೊಪ್ಪ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಮೆಹಬೂಬ ಬ್ಯಾಡಗಿ, ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಣ್ಣನವರ, ಉಪನ್ಯಾಸಕ ಡಾ.ಪ್ರಕಾಶ ಹೊಳೇರ, ಯೋಜನಾಧಿಕಾರಿ ಡಾ. ವಿ.ಬಿ. ಸತ್ಯಸಾವಿತ್ರಿ, ಸಹ ಯೋಜನಾಧಿಕಾರಿ ಡಾ. ಬಸನಗೌಡ ಲಕ್ಷ್ಮೇಶ್ವರ, ಡಾ. ಸಿ.ಎಸ್. ಕುಮ್ಮೂರ, ಕೆ.ಎಸ್. ಪಂಚಾಳ, ಎಸ್. ಗುಡ್ಡಪ್ಪ, ದಾನಪ್ಪ ಸಿಂಧೂರ, ಪರಸಪ್ಪ ನಾಯಕ, ಬಿ.ಎಂ. ಮೈಲಾರದ, ಮಹಾದೇವಪ್ಪ ಬಂಡಿವಡ್ಡರ, ಹನುಮಂತಪ್ಪ ಹಾನಗಲ್, ಶಿವಪುತ್ರಪ್ಪ ಬಾರ್ಕಿ, ಆನಂದ ಸಮ್ಮಣ್ಣನವರ, ದೇವೇಂದ್ರಪ್ಪ ನಾಯಕ, ಅಬ್ದುಲ್ ಖಾದರ ಶಿರಗೋಡ ಮೊದಲಾದವರು ಇದ್ದರು.ಸಮ್ಮಸಗಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ
ಹಾವೇರಿ: ಹಾನಗಲ್ಲ ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಏ. 15ರಿಂದ 17ರ ವರೆಗೆ ಗುತ್ತೆಮ್ಮದೇವಿ ದೇವಸ್ಥಾನದ ಕಳಸಾರೋಹಣ ಮಹೋತ್ಸವ ಜರುಗುವ ಹಿನ್ನೆಲೆ ಗ್ರಾಮ ವ್ಯಾಪ್ತಿಯಲ್ಲಿ ಏ. 15ರ ಬೆಳಗ್ಗೆ 6ರಿಂದ ಏ. 16ರ ಬೆಳಗ್ಗೆ 6ರ ವರೆಗೆ ಹಾಗೂ ಏ. 17ರ ಬೆಳಗ್ಗೆ 6ರಿಂದ ಏ. 18ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ. ಈ ದಿನಗಳಂದು ಶುಷ್ಕ ದಿವಸ ಎಂದು ಘೋಷಿಸಲಾಗಿದ್ದು, ಆಯಾ ದಿನಗಳಂದು ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.