ಮುಂಡರಗಿ: ಯುವಕರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗದಗ ಬಟಾಲಿಯನ್ ಕಮಾಂಡೆಂಟ್ ಆಫೀಸರ್ ಕರ್ನಲ್ ಭುವನ್ ಕಾರೆ ಹೇಳಿದರು.
ಬೆಟಾಲಿಯನ್ ಆಡಳಿತಾಧಿಕಾರಿ ಕರ್ನಲ್ ರೂಪವಿಂದರ್ ಸಿಂಗ್ ಮಾತನಾಡಿ, ಕೆಡೆಟ್‌ಗಳ ಶಿಸ್ತು, ನಿಷ್ಠೆ ಮತ್ತು ಭಾಗವಹಿಸುವಿಕೆಯನ್ನು ಶ್ಲಾಘಿಸಿ, ದೇಶಪ್ರೇಮವು ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ವ್ಯಕ್ತವಾಗಬೇಕು. ಈ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕೆಡೆಟ್‌ಗೂ ಅದು ಜೀವಮಾನ ಪಾಠವಾಗಲಿ ಎಂದು ಅಭಿಪ್ರಾಯಪಟ್ಟರು.
ಡಾ. ಆದಿತ್ಯ ಗೋಡ್ಕಿಂಡಿ ಹಾಗೂ ಡಾ. ಶ್ರೀಧರ ಕುರುಡಗಿ ಆರೋಗ್ಯ ಜಾಗೃತಿ, ಮಾನಸಿಕ ಸಮತೋಲನ ಮತ್ತು ಆಹಾರದ ನಿಯಮಿತತೆ ಕುರಿತು ಉಪಯುಕ್ತ ಸಲಹೆ ನೀಡಿದರು. ಗದಗ ಡಿಸಿಎಫ್ ಸಂತೋಷಕುಮಾರ ಕೆಂಚಮ್ಮನವರ ಪರಿಸರ ಸಂರಕ್ಷಣೆ ಹಾಗೂ ಕಪ್ಪತ್ತಗುಡ್ಡದ ಕುರಿತು ಮಾತನಾಡಿದರು. ಸ್ಪರ್ಧೆಯಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಪ್ರಶಸ್ತಿ ವಿತರಿಸಲಾಯಿತು.ವಿವಿಧ ಕಾಲೇಜು ಹಾಗೂ ಪ್ರೌಢಶಾಲೆಗಳಿಂದ ಸುಮಾರು 600 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಶಿಬಿರದ ಅವಧಿಯಲ್ಲಿ ಪಥಸಂಚಲನ ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ಹಲವು ಚಟುವಟಿಕೆ ಆಯೋಜಿಸಲಾಗಿತ್ತು. ರಾಷ್ಟ್ರಭಕ್ತಿ ಗೀತೆಗಳು, ನಾಟಕ, ನೃತ್ಯ ಮತ್ತು ದೇಶಪ್ರೇಮದ ಕುರಿತು ನಾಟಕಗಳ ಮೂಲಕ ಕೆಡೆಟ್‌ಗಳು ಪ್ರತಿಭೆ ಪ್ರದರ್ಶಿಸಿದರು.
ಪ್ರಾಚಾರ್ಯ ಜಿ.ಎಸ್. ಬಸವರಾಜ, ವಿನೋದಕುಮಾರ ಗುರಂಗ, ಕ್ಯಾಪ್ಟನ್ ಬಿ.ಎಸ್. ರಾಠೋಡ, ಕ್ಯಾಪ್ಟನ್ ಎಸ್.ಬಿ. ಜಾಧವ, ಲೆಫ್ಟಿನೆಂಟ್ ನಾಗರಾಜ ಎಂ.ಎ. ರೈಕಾತಿ, ಶ್ರೀಕಾಂತ ಕರಡಿ, ವಸಂತ ವೀರಾಪುರ, ಶ್ರೀನಿವಾಸ ಗುಳಗುಂದಿ, ವಿಜಯಕೃಷ್ಣ ಅನಿ, ಕೆ.ಐ. ಪಾಟೀಲ, ನಾಗಭೂಷಣ ಹಿರೇಮಠ ಉಪಸ್ಥಿತರಿದ್ದರು.