ಯುವಕರು ಉತ್ತಮ ಶಿಕ್ಷಣ ಪಡೆದು ರಾಜಕೀಯಕ್ಕೆ ಬಂದು ತಮ್ಮದೇಯಾದ ಛಾಪು ಮೂಡಿಸಬೇಕು. ಪ್ರಸ್ತುತ ರಾಜಕೀಯದಲ್ಲಿಯೂ ಯುವಕರಿಗೆ ಸೂಕ್ತ ಸ್ಥಾನಮಾನ ಮತ್ತು ಮನ್ನಣೆ ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯ. ಯುವಕರು ರಾಜಕೀಯವಾಗಿ ಮುಂಚೂಣಿಗೆ ಬಂದರೆ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಯುವಕರು ಉತ್ತಮ ಶಿಕ್ಷಣ ಪಡೆದು ರಾಜಕೀಯಕ್ಕೆ ಬಂದು ತಮ್ಮದೇಯಾದ ಛಾಪು ಮೂಡಿಸಬೇಕು. ಪ್ರಸ್ತುತ ರಾಜಕೀಯದಲ್ಲಿಯೂ ಯುವಕರಿಗೆ ಸೂಕ್ತ ಸ್ಥಾನಮಾನ ಮತ್ತು ಮನ್ನಣೆ ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯ. ಯುವಕರು ರಾಜಕೀಯವಾಗಿ ಮುಂಚೂಣಿಗೆ ಬಂದರೆ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯಪಟ್ಟರು.
ನಗರದ ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಪಿ.ಯು. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಇರುತ್ತವೆ. ಪ್ರತಿಯೊಂದು ವಿಷಯದಲ್ಲೂ ಕೇವಲ ವಿರೋಧಿಸುವುದಕ್ಕಿಂತ ರಚನಾತ್ಮಕವಾಗಿ ಯೋಚಿಸಿ ಸರ್ಕಾರದ ಉತ್ತಮ ಕೆಲಸಗಳನ್ನು ಬೆಂಬಲಿಸುವುದು ಮುಖ್ಯ. ಕೇವಲ ಪಕ್ಷಗಳ ನಡುವಿನ ವಾದ-ವಿವಾದಗಳಿಗಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಧೈರ್ಯವಂತರಾಗಿ ಯುವಕರು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಡಿ.2 ರಿಂದ 11 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನ ವೀಕ್ಷಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಭೇಟಿ ಮತ್ತು ವೀಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ರುದ್ರಗೌಡ ಎಂ.ಮಾತನಾಡಿ, ಯುವ ಸಂಸತ್ತು ಕಾರ್ಯಕ್ರಮವು ಶಾಸಕಾಂಗದ ಪ್ರಜಾಪ್ರಭುತ್ವದ ಕಾರ್ಯವೈಖರಿ ಪ್ರಾಯೋಗಿಕವಾಗಿ ಕಾಣುವ ಅತ್ಯುತ್ತಮ ವೇದಿಕೆಯಾಗಿದೆ. ಜವಾಬ್ದಾರಿಯುತ ನಾಯಕರ ನಿರ್ಮಾಣ, ಸಹಿಷ್ಣುತೆ, ಚರ್ಚೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶ. ಮಸೂದೆಗಳ ಮಂಡನೆ, ಚರ್ಚೆ ಹಾಗೂ ಶಾಸಕಾಂಗದ ಕಾರ್ಯಕಲಾಪಗಳ ಮೂಲಕ ಯುವ ನಾಯಕರಿಗೆ ಆಡಳಿತ ವ್ಯವಸ್ಥೆಯ ಪರಿಪೂರ್ಣ ಕಲ್ಪನೆ ಸಿಗುತ್ತದೆ. ರಾಜ್ಯಮಟ್ಟದ ಯುವ ಸಂಸತ್ತು ಕಾರ್ಯಕ್ರಮಕ್ಕೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲರ ಸಂಘದ ಖಜಾಂಜಿ ಜಿ. ಶ್ರೀಶೈಲ ಮಾತನಾಡಿ, ಅಧಿವೇಶನಗಳ ಕಾರ್ಯವೈಖರಿ ಮತ್ತು ಶಾಸಕಾಂಗದ ನಡವಳಿಕೆಗಳ ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಈ ವೇದಿಕೆ ಸಹಕಾರಿ. ಇಂದು ಸಂಸತ್ತು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿರುವುದು ದೇಶದ ಪ್ರಗತಿಗೆ ಮುನ್ಸೂಚನೆಯಾಗಿದೆ. ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, ದೇಶದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಭಾರತದ ಸಂವಿಧಾನ ಅತ್ಯಂತ ಮುಖ್ಯವಾಗಿದೆ. ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ರಾಜ್ಯ ಪ್ರತಿನಿಧಿ ಮಲ್ಕನಗೌಡ ಪಾಟೀಲ್, ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಶರಣಪ್ಪ ರಾಹುಲ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.