ಪ್ರತಿ ಪ್ರಜೆಯಲ್ಲೂ ರಾಷ್ಟ್ರಾಭಿಮಾನ ಜಾಗೃತಗೊಳಿಸುವ ಹಿನ್ನೆಲ್ಲೆಯಲ್ಲಿ ಹರ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಆಧುನಿಕ ಭರಾಟೆಯಲ್ಲಿರುವ ಯುವ ಸಮೂಹ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ: ಪ್ರತಿ ಪ್ರಜೆಯಲ್ಲೂ ರಾಷ್ಟ್ರಾಭಿಮಾನ ಜಾಗೃತಗೊಳಿಸುವ ಹಿನ್ನೆಲ್ಲೆಯಲ್ಲಿ ಹರ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಆಧುನಿಕ ಭರಾಟೆಯಲ್ಲಿರುವ ಯುವ ಸಮೂಹ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ನಗರದ ಜಿ.ಎಚ್. ಕಾಲೇಜ್ ಆವರಣದಲ್ಲಿ ಮಂಗಳವಾರ ಪ್ರತಿಜ್ಞಾವಿಧಿ ಬೋಧಿಸಿ, ಹರ ಘರ್ ತಿರಂಗಾ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನಿಕ ಹುದ್ದೆ ಹೊಂದಿದವರಿಗೆ ಮಾತ್ರ ರಾಷ್ಟ್ರಧ್ವಜಾರೋಹಣ ಮಾಡಲು ಅವಕಾಶ ಇತ್ತು. ಆದರೆ ಪ್ರಧಾನ ಮಂತ್ರಿಗಳ ಆದೇಶದಂತೆ ೨೦೨೨ರಲ್ಲಿ ೭೫ನೇ ಆಜಾದಿಕ ಅಮೃತ ಮಹೋತ್ಸವ ಅಂಗವಾಗಿ ಹರ ಘರ್ ತಿರಂಗಾ ಅಭಿಯಾನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಈಗ ಅದರ ಭಾಗವಾಗಿ ಮತ್ತೆ ಮನೆಗಳ ಮೇಲೆ ಧ್ವಜಾರೋಹಣ ಮಾಡುವ ಅವಕಾಶ ಒದಗಿಬಂದಿದ್ದು, ಶಿಷ್ಟಾಚಾರದ ಪ್ರಕಾರ ಧ್ವಜಾರೋಹಣ ಮಾಡಬೇಕು ಎಂದು ಸಲಹೆ ನೀಡಿದರು. ಹರ ಘರ್ ತಿರಂಗಾ ಅಭಿಯಾನ ಅಂಗವಾಗಿ ಜಾಥಾ, ರ‍್ಯಾಲಿ, ಮ್ಯಾರಥಾನ್ ಆಯೋಜಿಸಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ರಾಷ್ಟ್ರಾಭಿಮಾನ ಮೂಡಿಸುವ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಭಕ್ತಿ ಮೂಡಿಸುವ ಜೊತೆಗೆ ಸುಭದ್ರ ರಾಷ್ಟ್ರಕಟ್ಟುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.ಇದೇ ವೇಳೆ ರಾಷ್ಟ್ರಧ್ವಜವನ್ನು ಜಿಲ್ಲಾಧಿಕಾರಿಗಳು ಕಾಲೇಜು ವಿದ್ಯಾರ್ಥಿನಿಯರಿಗೆ ಹಸ್ತಾಂತರ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮಹತ್ವ ತಿಳಿಸಿದರು. ಆಕರ್ಷಕ ಜಾಥಾ: ಹರ್ ಘರ್ ತಿರಂಗಾ ಅಭಿಯಾನ ಜಾಥಾ ಅತ್ಯಂತ ಆಕರ್ಷಕವಾಗಿತ್ತು, ಗೊಂಬೆ ಕುಣಿತ, ಕಾಲೇಜು ವಿದ್ಯಾರ್ಥಿಗಳ ಘೋಷವಾಕ್ಯಗಳು ಪ್ರತಿ ನಾಗರೀಕರಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳ್ಳುವಂತೆ ಮಾಡಿತು. ಜಾಥಾದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಚೆನ್ನಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಕಟ್ಟಿ, ತಹಸೀಲ್ದಾರ ಶಂಕರ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.