ನರಗುಂದ: ಯುವ ಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರ ಅರಿಯದೇ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಉಪನ್ಯಾಸಕ ಡಾ. ಎಸ್.ಎಸ್. ಕಟ್ಟೇಕಾರ ಹೇಳಿದರು.
ಸಂಸ್ಥೆಯ ನಿರ್ದೇಶಕ ಅಜ್ಜನಗೌಡ ಪಾಟೀಲ ಮಾತನಾಡಿ, ವಿವೇಕಾನಂದರ ಆದರ್ಶ ಬೆಳೆಸಿಕೊಳ್ಳುವುದೇ ನಿಜವಾದ ವಿದ್ಯಾಭ್ಯಾಸದ ಜತೆಗೆ ಸದ್ಬುದ್ಧಿ ಬೆಳೆಸಿಕೊಂಡು ದೇಶದ ಚಿಂತನೆ ಮಾಡುವಂತಹ ಸತ್ಪ್ರಜೆಯಾಗಿ ಮೂಡಿ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನ್ಯಾಸಕಿ ಎಸ್.ಎ. ಬಾರಕೇರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ, ಟಿವಿಗಳಿಂದ ದೂರ ಇದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾಭಕ್ತಿಗಳನ್ನು ಮೈಗೂಡಿಸಿ ಸತ್ಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ದ್ವಿತೀಯ ವರ್ಷದ ಹಾಗೂ ಅಂತಿಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪ ಎರಚುವ ಮೂಲಕ ವಿಶಿಷ್ಟವಾಗಿ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಪಾಟೀಲ, ಕಾರ್ಯದರ್ಶಿ ಮಹೇಶಗೌಡ ಪಾಟೀಲ, ನಿರ್ದೇಶಕ ಈರನಗೌಡ ಪಾಟೀಲ, ಶಿವನಗೌಡ ಪಾಟೀಲ, ಕಾಲೇಜಿನ ದೈಹಿಕ ನಿರ್ದೇಶಕಿ ಎನ್.ಎಂ. ವಾಗಮೊಡೆ, ಬೋಧಕರು, ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳು ಇದ್ದರು.