ಸರ್ಕಾರಿ ಅಥವಾ ಖಾಸಗಿ ಉದ್ದಿಮೆಗಳಲ್ಲಿ ನೌಕರರಾಗುವ ಬದಲು ಹೆಚ್ಚಿಗೆ ಆದಾಯ ಮತ್ತು ಗೌರವ ನೀಡುವ ಕೃಷಿ ಬೇಸಾಯ ಮಾಡಲು ಯುವ ಜನಾಂಗ ಆಸಕ್ತಿ ತೋರಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಹಳಿಯಾಳ: ಸರ್ಕಾರಿ ಅಥವಾ ಖಾಸಗಿ ಉದ್ದಿಮೆಗಳಲ್ಲಿ ನೌಕರರಾಗುವ ಬದಲು ಹೆಚ್ಚಿಗೆ ಆದಾಯ ಮತ್ತು ಗೌರವ ನೀಡುವ ಕೃಷಿ ಬೇಸಾಯ ಮಾಡಲು ಯುವ ಜನಾಂಗ ಆಸಕ್ತಿ ತೋರಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಸೋಮವಾರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಆಯೋಜಿಸಿದ ರೈತ ದಿನಾಚರಣೆ ಉದ್ಘಾಟಿಸಿ, ವಿವಿಧ ಕೃಷಿ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಕೃಷಿ ಪರಿಕರ ವಿತರಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕೃಷಿ ಬೇಸಾಯ ಬಿಟ್ಟು, ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅವಿಷ್ಕಾರ, ಹೊಸ ಬೇಸಾಯ ಪದ್ಧತಿ, ಆದಾಯ ತರುವ ಬೆಳೆ ಬೆಳೆಸಿ ಬದುಕನ್ನು ಸಮೃದ್ಧರನ್ನಾಗಿಸಿಕೊಳ್ಳಬೇಕು. ಸಿರಿಧಾನ್ಯ ಬೇಸಾಯದಿಂದಲೂ ಅಧಿಕ ಲಾಭ ಪಡೆಯಲು ಸಾಧ್ಯವಿದ್ದು ಹಳಿಯಾಳ ಕ್ಷೇತ್ರದಲ್ಲಿ ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಸರ್ವ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು
ಸಹಕಾರಿ ರಂಗದಲ್ಲಿ ಭ್ರಷ್ಟಾಚಾರ:ರೈತರ ಬೆಳವಣಿಗೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಸಹಕಾರಿ ರಂಗದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇಂದು ಸಹಕಾರಿ ರಂಗದಲ್ಲಿ ನೌಕರಿ ನೀಡಲು ₹ 10ರಿಂದ ₹ 20 ಲಕ್ಷ ಪಡೆಯುತ್ತಿರುವುದು ಜಗಜ್ಜಾಹೀರವಾಗಿದೆ ಎಂದರು.ಹಳಿಯಾಳ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ಹೋರಾಟ ಮಾಡಿದವರು ಮುಂದೆ ಕಾರ್ಖಾನೆ ಕೆಲಸ ಆರಂಭಿಸಿದಾಗ ಕಾರ್ಖಾನೆಗೆ ದಾಂಡೇಲಿ ಕಾಳಿನದಿ ನೀರು ನೀಡುವುದಿಲ್ಲವೆಂದು ಪ್ರತಿಭಟಿಸಿದರು.
ನನ್ನ ಪ್ರತಿಕೃತಿ ಸುಟ್ಟು ಹಾಕಿದರು. ಯಾರೂ ಕಾರ್ಖಾನೆ ವಿರುದ್ಧ ಹೋರಾಟ ಮಾಡಿದರೋ ಅವರೇ ಈಗ ಕಾರ್ಖಾನೆಯ ಮೊದಲ ಫಲಾನುಭವಿಗಳಾಗಿ ಹೆಚ್ಚಿನ ಲಾಭ ಪಡೆಯುವವರ ಸಾಲಿನಲ್ಲಿದ್ದಾರೆ ಎಂದು ಶಾಸಕರು ಕುಟುಕಿದರು.ಕಾರ್ಯಕ್ರಮದಲ್ಲಿ 30 ರೈತರಿಗೆ ತುಂತುರು ನೀರಾವರಿ ಘಟಕ, 10 ರೈತರಿಗೆ ತಾಡಪಾಲ್, 9 ರೈತರಿಗೆ ಕೃಷಿ ಯಂತ್ರೋಪಕರಣ, 11 ಸ್ವಸಹಾಯ ರೈತ ಗುಂಪುಗಳಿಗೆ ತಲಾ ₹ 5 ಸಾವಿರ ಪ್ರೋತ್ಸಾಹಧನ ಮಂಜೂರಾತಿ ಪತ್ರಗಳನ್ನು ಶಾಸಕರು ವಿತರಿಸಿದರು.
ಕೃಷಿಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ: ಸಮಗ್ರ ಬೆಳೆ ಪದ್ಧತಿಯಲ್ಲಿ ಗುಂಡೊಳ್ಳಿ ಗ್ರಾಮದ ಚನ್ನಪ್ಪ ಕಲಕರ, ಸಾವಯವ ಕೃಷಿಯಲ್ಲಿ ಮಾಗವಾಡ ಗ್ರಾಮದ ಪಾರಿಷ್ ದೊಡ್ಡಜೈನ, ಹೈನುಗಾರಿಕೆಯಲ್ಲಿ ದಾಂಡೇಲಿಯ ಅಣ್ಣಪ್ಪ ಗುಂಜೀಕರ, ರೇಷ್ಮೇ ಬೇಸಾಯದಲ್ಲಿ ಬಿ.ಕೆ. ಹಳ್ಳಿಯ ದೇಮಣ್ಣ ಚೋರ್ಲೆಕರ ಮತ್ತು ತೋಟಗಾರಿಕೆಯಲ್ಲಿ ಹಂಪಿಹೋಳಿಯ ಮಂಜುನಾಥ ದೀಪಸಾರ ಅವರಿಗೆ ಶಾಸಕರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಸಭಾ ಕಾರ್ಯಕ್ರಮದ ನಂತರ ಸಿರಿಧಾನ್ಯಗಳ ಬೇಸಾಯದ ಬಗ್ಗೆ ಸಂವಾದ ನಡೆಯಿತು. ಗ್ರೇಡ್-2 ತಹಸೀಲ್ದಾರ್ ಜಿ.ಕೆ. ರತ್ನಾಕರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭಾ ಮಾಜಿ ಉಪಾಧ್ಯಕ್ಷೆ ಸುವರ್ಣಾ ಮಾದರ, ಎಸ್.ಜಿ. ಮಾನಗೆ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಇದ್ದರು.