ಯುವಜನಾಂಗ ಕೃಷಿಯತ್ತ ಮುಖಮಾಡಲಿ

KannadaprabhaNewsNetwork |  
Published : Feb 24, 2024, 02:30 AM IST
ಅಖಿಲ ಭಾರತ ಕೃಷಿ, ಗ್ರಾಮ ವಿಕಾಸದ ರಾಷ್ಟ್ರೀಯ ಸಮ್ಮೇಳನಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಇಲ್ಲಿನ ಬೈರಿದೇವರಕೊಪ್ಪದ ಭಗವದ್ಗೀತಾ ಜ್ಞಾನಲೋಕದಲ್ಲಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು.

ಹುಬ್ಬಳ್ಳಿ: ಇಂದಿನ ಯುವ ಜನಾಂಗ ಕೃಷಿಯತ್ತ ಮುಖ ಮಾಡದಿರುವುದು ನೋವಿನ ಸಂಗತಿ. ಕೃಷಿಯಿಂದಲೇ ಈ ದೇಶ ಉಳಿದಿದ್ದು, ಇನ್ನು ಮುಂದಾದರೂ ಯುವಕರು ಕೃಷಿಯತ್ತ ಮುಖ ಮಾಡಿದರೆ ಮುಂದಿನ ಜನಾಂಗಕ್ಕೆ ಅನ್ನ ದೊರೆಯಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಐ.ಕೆ. ಕಾಳಪ್ಪನವರ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿನ ಬೈರಿದೇವರಕೊಪ್ಪದ ಭಗವದ್ಗೀತಾ ಜ್ಞಾನಲೋಕದಲ್ಲಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರೀಕರಣದ ಪರಿಣಾಮ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಫಲವತ್ತಾದ ಭೂಮಿ ಕಡಿಮೆಯಾದರೆ ಮುಂದೊಂದು ದಿನ ಆಹಾರ ಬೆಳೆಗಳಿಗಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹಿಂದಿನಂತೆ ಯುವಕರು ಕೃಷಿ ಕಾಯಕಕ್ಕೆ ಮನಸ್ಸು ಮಾಡುತ್ತಿಲ್ಲ. ನಗರ ಪ್ರದೇಶಗಳಲ್ಲಿ ಯಾವುದಾದರೂ ಪರವಾಗಿಲ್ಲ ಒಂದು ಉದ್ಯೋಗ ಮಾಡಬೇಕು ಎಂದು ಬಯಸುತ್ತಿದ್ದು, ನಗರದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕೃಷಿಯಲ್ಲಿ ತೊಡಗುವವರು ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೂ ಕೆಲವರಿಗೆ ಕೃಷಿಯತ್ತ ಒಲವಿದ್ದರೂ ಅವರಿಗೆ ಭೂಮಿ ಸೇರಿದಂತೆ ಇತ್ತ ಸೌಲಭ್ಯಗಳು ಇರುವುದಿಲ್ಲ ಎಂದರು.

ಜಗತ್ತಿನಲ್ಲಿ 38 ರಾಷ್ಟ್ರಗಳು ಅಪೌಷ್ಠಿಕತೆಯನ್ನು ಅನುಭವಿಸುತ್ತಿವೆ. ಆದರೆ, ಅಂತಹ ಪರಿಸ್ಥಿತಿ ಭಾರತದಲ್ಲಿಲ್ಲ. ಆಹಾರ ಬೆಳೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ಆಹಾರ ಬೆಳೆಗಳ ಬದಲಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ಬೆಳವಣಿಗೆ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ವಾಣಿಜ್ಯ ಬೆಳೆಗಳ ಜತೆಗೆ ಆಹಾರ ಬೆಳೆಗಳು, ನವ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ತೊಡಗಿರುವುದು ಶ್ಲಾಘನೀಯ. ದೇಶದ ವಿವಿಧ ಭಾಗಗಳಲ್ಲಿ ರೈತರಿಗೆ ಸಾವಯವ ಕೃಷಿ ಬಗ್ಗೆ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. ಇದರಂತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಯುವ ಜನಾಂಗಕ್ಕೆ ಕೃಷಿ ಕುರಿತು ಪ್ರೇರಣೆ ನೀಡಬೇಕು. ನಮ್ಮ ಮೂಲ ವೃತ್ತಿಯಾಗಿರುವ ಕೃಷಿಯನ್ನು ಉಳಿಸಿಕೊಂಡು ದೇಶಕ್ಕೆ ಅನ್ನ ನೀಡುವ ಕೆಲಸ ಆಗಬೇಕು ಎಂದರು.

ಈಶ್ವರೀಯ ವಿವಿಯ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಘಟಕದ ಉಪಾಧ್ಯಕ್ಷ ರಾಜಯೋಗಿ ರಾಜು, ಬಿ.ಕೆ. ಸುನಂದಾ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಟಿ. ಪಾಟೀಲ, ಹೈಕೋರ್ಟ್ ವಕೀಲ ಎಸ್.ಸಿ. ಜೈನರ್, ರಂಗಾ ಬದ್ದಿ, ಪ್ರಕಾಶ ಬೆಂಡಿಗೇರಿ ಸೇರಿದಂತೆ ಹಲವರಿದ್ದರು. ಸಮ್ಮೇಳನಕ್ಕೆ ವಿವಿಧ ರಾಜ್ಯಗಳಲ್ಲಿ ಯೋಗಿಖೇತಿ ಯೋಜನೆಯಲ್ಲಿ ತೊಡಗಿದ್ದವರು ಆಗಮಿಸಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ