ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಂಸಾರದ ಬಂಡಿಯನ್ನು ಸುರಕ್ಷಿತ ಹಾಗೂ ಸರಿದಿಕ್ಕಿನಲ್ಲಿ ಎಳೆದೊಯ್ಯಬೇಕಾದರೆ ಪ್ರೀತಿಯ ಕೀಲು ಇರಬೇಕೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಶ್ರೀಮುರುಘರಾಜೇಂದ್ರ ಮಠದಲ್ಲಿ ಸೋಮವಾರ ನಡೆದ 34ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆ ಮುಖ್ಯ. ಪ್ರೀತಿ ಇಲ್ಲದ ಬದುಕು ಅರ್ಥವಿಲ್ಲದ್ದು. ಪರಸ್ಪರ ಅರ್ಥೈಸಿಕೊಳ್ಳುವಲ್ಲಿ ನಾವು ಸೋಲಬಾರದು. ಏನೇ ಕಷ್ಟಗಳು ಬಂದರೂ ಜೊತೆಗಿದ್ದು ಎದುರಿಸಬೇಕು. ಸಂಸಾರದ ಬಂಡಿಯನ್ನು ಪ್ರೀತಿಯಿಂದ ಎಳೆಯಬೇಕು ಎಂದರು.
ಶ್ರೀಮಂತರು ಕೋಟಿ ಕೋಟಿ ಖರ್ಚು ಮಾಡುವ ಮದುವೆಗಳಲ್ಲಿ ಹಸಿದ ಹೊಟ್ಟೆಗಳಿಗಿಂತ ತುಂಬಿದ ಹೊಟ್ಟೆಗಳನ್ನು ಮತ್ತೆ ತುಂಬಿಸುವ ಕೆಲಸ ನಡೆಯುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ಮೊದಲಾದ ದಾರ್ಶನಿಕರು ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡಿದರು. ಮುರುಘಾಮಠವು ಬಡವರ ಪರವಾಗಿ ನಿಂತಿದೆ. ಇಲ್ಲಿ ಆಗಿಹೋಗಿರುವ ಎಲ್ಲ ಜಗದ್ಗುರುಗಳು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಯಲು ಸೀಮೆ ನಾಡಿನಲ್ಲಿರುವ ಶ್ರೀಮಠದಲ್ಲಿ ಪ್ರೀತಿ ಇದೆ. ಹಸಿದವರಿಗೆ ಅನ್ನ, ಜ್ಞಾನ ಎಲ್ಲ ರೀತಿಯ ದಾಸೋಹ ನಡೆಯುತ್ತಿದೆ ಎಂದರು.ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ. ಪಾಲಾಟೆ ವೆಂಕಟರಾವ್ ಮಾತನಾಡಿ, 12ನೇ ಶತಮಾನದ ಆಶೋತ್ತರಗಳನ್ನು ಚಿತ್ರದುರ್ಗದ ಮುರುಘಾಮಠ ನಿಜ ದನಿಯಲ್ಲಿ ಆಚರಿಸುತ್ತಿದೆ. ಯಾವುದೇ ಲಿಂಗಭೇದ, ಜಾತಿ ಭೇದವಿಲ್ಲದೆ ವಿವಾಹಗಳು ನಡೆಯುತ್ತಿರುವುದು ಪ್ರೀತಿಯ ಧ್ಯೋತಕವಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಠ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾದಾನ ಮತ್ತು ಅನ್ನದಾಸೋಹ ನಡೆಯುತ್ತಿರುವುದು ಸಂತಸದ ವಿಷಯ. ಮಠವು ಕಳೆದ 35ವರ್ಷಗಳಿಂದ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ದೇಹ ಎರಡಾದರೂ ಮನಸ್ಸು ಒಂದೇ ರೀತಿ ಇರಬೇಕು. ಹಾಗೆ ನವದಂಪತಿಗಳು ಒಂದೇ ಆಗಿರಬೇಕು. ಸಂಸಾರದಲ್ಲಿ ನೆಮ್ಮದಿ ಬೇಕು. ಕಾರು, ಸಂಪತ್ತು ಇದ್ದರೆ ಮಾತ್ರ ಸಾಂಸಾರಿಕ ಬದುಕು ಸುಧಾರಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ನಾಲ್ಕು ಜೋಡಿಗಳು ದಾಂಪತ್ಯಕ್ಕೆ ಅಡಿ ಇಟ್ಟರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.