ಸಿದ್ದಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೀನ್ ಕೇರ್ ಸಂಸ್ಥೆ ಶಿರಸಿ ಹಾಗೂ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನಸಂಖ್ಯಾ ಸ್ಥಿರತೆ ಹಾಗೂ ಸ್ಕಿಜಿಯೋ ಫ್ರೇನಿಯಾ ಖಾಯಿಲೆಯ ಚಿಕಿತ್ಸೆ ಮತ್ತು ಕಾಳಜಿಯ ಕುರಿತು ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ| ನಾಯ್ಕ ಲಕ್ಷ್ಮೀಕಾಂತ ಕಾರ್ಯಕ್ರಮ ಉದ್ಘಾಟಿಸಿ, ಜನಸಂಖ್ಯೆಯಲ್ಲಿ ಏರುಪೇರಾಗದಂತೆ ಅದರ ಬೆಳವಣಿಗೆಯನ್ನು ಸ್ಥಿರವಾಗಿಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಮಾನವ ಸಂಪನ್ಮೂಲವನ್ನು ಹೊಂದುವ ಅಗತ್ಯತೆ ದೇಶದ ಮುಂದಿದೆ. ಹಾಗಾಗಿ ಹೆಣ್ಣಿರಲಿ, ಗಂಡಿರಲಿ ಎರಡು ಮಕ್ಕಳಿಗೆ ಸೀಮಿತಗೊಳಿಸುವ ರೀತಿಯ ಜನಸಂಖ್ಯಾ ನೀತಿಯನ್ನು ಪ್ರತಿಯೊಬ್ಬರು ಪಾಲಿಸಬೇಕು. ಹೆಣ್ಣುಭ್ರೂಣ ಹತ್ಯೆ, ಹೆಣ್ಣು ಶಿಶುವಿನ ಹತ್ಯೆ ಇಂಥ ಪ್ರಮಾದಗಳನ್ನು ನಿಲ್ಲಿಸಬೇಕು ಎಂದರು.
ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿ ಯುವಜನತೆ ಜನಸಂಖ್ಯಾ ಸ್ಥಿರತೆ ಮತ್ತು ಗುಣಾತ್ಮಕ ಬೆಳವಣಿಗೆ ಕುರಿತು ತಾವು ಮನೆ, ಹಳ್ಳಿ ನೆರೆಯವರಲ್ಲಿ ಜಾಗೃತಿ ಮೂಡಿಸಬೇಕು. ಮನೋವ್ಯಾಧಿಗೆ ತುತ್ತಾದವರನ್ನು ಹೀಯಾಳಿಸದೇ ಅವರೆಡೆಗೆ ಸಹಾನುಭೂತಿ ತೋರಿಸಿ ಆಪ್ತ ಸಲಹಾ ಕೇಂದ್ರಗಳ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ, ನೆರವು, ಕಾಳಜಿ ನೀಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ ಎನ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕಿ ಡಾ.ರಶ್ಮಿ ಎನ್ ಕರ್ಕಿ ಉಪಸ್ಥಿತರಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ. ಗಣಪತಿ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಜಾದವ್ ಬಿ. ವಂದಿಸಿದರು. ಕಾರ್ಯಕ್ರಮ ನಿರ್ವಹಿಸಿದರು. ಗ್ರೀನ್ ಕೇರ್ ಸಂಸ್ಥೆಯಿಂದ ಜನಸಂಖ್ಯಾ ಸ್ಥಿರತೆ ಹಾಗೂ ಸ್ಕಿಜಿಯೋ ಫ್ರೇನಿಯಾ ಕಾಯಿಲೆಯ ಕುರಿತು ಜಾಗ್ರತಿ ಕಲಾಪ್ರದರ್ಶನಗಳು, ಕಿರುನಾಟಕ ಪ್ರದರ್ಶನಗೊಂಡವು.