ವಿಜಯನಗರ ಜಿಲ್ಲೆಗೆ ಭರವಸೆ ಬೆಳಕಾಗಲಿ 2026

KannadaprabhaNewsNetwork |  
Published : Jan 01, 2026, 03:30 AM IST
31ಎಚ್‌ಪಿಟಿ1- ಹೊಸಪೇಟೆಯ ಜಿಲ್ಲಾಸ್ಪತ್ರೆ ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. | Kannada Prabha

ಸಾರಾಂಶ

ಜಿಲ್ಲೆ ಜನತೆ 2026ರಲ್ಲಾದರೂ ಸರ್ಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಲಿದೆಯೇ ಎಂಬುದನ್ನು ಎದುರು ನೋಡುತ್ತಿದ್ದಾರೆ.

ಕೃಷ್ಣ ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆ ಮಟ್ಟಿಗೆ 2025 ನಿರೀಕ್ಷೆಯಲ್ಲೇ ಕಳೆದು ಹೋಗಿದೆ. ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಜಿಲ್ಲೆಯಲ್ಲೇ ನಡೆದರೂ ನೂತನ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಕೂಡ ಘೋಷಣೆ ಮಾಡಲಿಲ್ಲ. ಹಾಗಾಗಿ ಜಿಲ್ಲೆ ಜನತೆ 2026ರಲ್ಲಾದರೂ ಸರ್ಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಲಿದೆಯೇ ಎಂಬುದನ್ನು ಎದುರು ನೋಡುತ್ತಿದ್ದಾರೆ.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಸಾಕಾರಗೊಳ್ಳಬೇಕಿದೆ. ಅದರಲ್ಲೂ ಜಿಲ್ಲೆಯಲ್ಲಿ ಸಾಮೂಹಿಕ ಗುಳೆ ಹೋಗುವುದನ್ನು ತಪ್ಪಿಸಲು ಸಣ್ಣ ಕೈಗಾರಿಕೆಗಳು, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಆಗಬೇಕಿದೆ. ಇನ್ನು ಹೊಸಪೇಟೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಸಕ್ಕರೆ ಕಾರ್ಖಾನೆ ಆರಂಭಿಸಬೇಕಿದೆ.

ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜ್‌ ಆರಂಭಗೊಳ್ಳಬೇಕಿದೆ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‌, ಕಾನೂನು ಕಾಲೇಜ್‌ ಸೇರಿದಂತೆ ಉದ್ಯೋಗ ಸೃಷ್ಟಿಗಾಗಿ ಆದ್ಯತೆ ನೀಡಬೇಕಿದೆ. ಪ್ರವಾಸೋದ್ಯಮದ ಆಕರ್ಷಣೀಯ ಕೇಂದ್ರವಾಗಿರುವ ಹಂಪಿಯಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಸೌಕರ್ಯಗಳನ್ನು ಒದಗಿಸಬೇಕಿದೆ.

ಹಂಪಿಯಲ್ಲಿ ಹೆಲಿ ಟೂರಿಸ್ಂ, ಕಮಲಾಪುರ ಕೆರೆಯಲ್ಲಿ ಬೋಟಿಂಗ್‌ ಸೇರಿದಂತೆ ಕೆಲ ಕ್ರಮಗಳನ್ನು ವಹಿಸಬೇಕಿದೆ. ಜಿಲ್ಲೆಯಲ್ಲಿ ರೈತರ ಒಳಿತಿಗಾಗಿ ಕೆರೆ ತುಂಬಿಸುವ ಯೋಜನೆಗಳನ್ನು ಕೈಗೊಳ್ಳಬೇಕಿದೆ. ರೈಲ್ವೆ ವಲಯದಲ್ಲೂ ಮೂಲಭೂತ ಸೌಕರ್ಯ ಒದಗಿಸಬೇಕಿದೆ.

ವಿಜಯನಗರ ಜಿಲ್ಲೆ ಐತಿಹಾಸಿಕ ಜಿಲ್ಲೆ ಆಗಿದ್ದು, ಈ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ದೊರೆಯಬೇಕಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚಳಕ್ಕಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ದೊರೆಯಬೇಕಿದೆ. ಇದರಿಂದ ಸಾಮೂಹಿಕ ಗುಳೆ ಹೋಗುವ ಪರಿಪಾಠಕ್ಕೂ ಕಡಿವಾಣ ಬೀಳಲಿದೆ.

ಉದ್ಘಾಟನೆ ಭಾಗ್ಯ ಕಾಣದ ಜಿಲ್ಲಾಸ್ಪತ್ರೆ: ವಿಜಯನಗರ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧಗೊಂಡಿದ್ದರೂ ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ. ₹124 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಇದುವರೆಗೆ ಕಟ್ಟಡ ಮಾತ್ರ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಇನ್ನು ಹೂವಿನಹಡಗಲಿ ಪಟ್ಟಣದಲ್ಲಿ ನೆಮ್ಮದಿ ಊರು ಯೋಜನೆಯ ಕಾಮಗಾರಿ ಅರೆಬರೆಯಾಗಿದೆ. ಹರಪನಹಳ್ಳಿಯಲ್ಲಿ ಗರ್ಭಗುಡಿ ಬ್ರೀಜ್‌ ಕಂ ಬ್ಯಾರೇಜ್‌ ಕಾಮಗಾರಿಗೆ ಇನ್ನು ಸಾಕಾರಗೊಂಡಿಲ್ಲ. ಹಡಗಲಿಯಲ್ಲಿ ಮಾಗಳ- ಕಲ್ಲಗಾನೂರು ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ, ಹುಲಿಗುಡ್ಡದ ಬಳಿ ಪೋಲೀಸ್ ತರಬೇತಿ ಶಾಲೆ ಸ್ಥಾಪನೆ, ಕೊಯಿಲಾರಗಟ್ಟಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ನೀರಾವರಿ ಪ್ರದೇಶ ವಿಸ್ತರಣೆ, ಕೆರೆ ತುಂಬಿಸುವ ಯೋಜನೆ ಅರೆಬರೆಯಾಗಿದ್ದು, ಇದನ್ನು ಸಾಕಾರಗೊಳಿಸಬೇಕಿದೆ.

ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಕೂಡ 2026ರಲ್ಲಿ ಆಯಾ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಐದು ಪ್ರಮುಖ ಭರವಸೆಗಳನ್ನು ನೀಡಿದ್ದಾರೆ.

* ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಲು ಒತ್ತು.

* ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ ಹಳ್ಳಿಗಳಲ್ಲಿ ವಿದ್ಯುತ್‌ ಪರಿವರ್ತಕಗಳ ಸಮಸ್ಯೆಗೆ ಪರಿಹಾರ.

* ನಗರ, ಪಟ್ಟಣ, ಹಳ್ಳಿ, ತಾಂಡಾಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ. ಸಿಸಿ ರಸ್ತೆಗಳ ನಿರ್ಮಾಣ, ಒಳಚರಂಡಿಗೆ ಒತ್ತು.

* ಸರ್ಕಾರಿ ಶಾಲಾ, ಕಾಲೇಜುಗಳ ಕಟ್ಟಡ ನಿರ್ಮಾಣ ಮತ್ತು ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ದುರಸ್ತಿ. ಹಾಸ್ಟೆಲ್‌ಗಳಿಗೆ ಒತ್ತು.

*ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ.

-ಕೆ. ನೇಮರಾಜ್‌ ನಾಯ್ಕ, ಶಾಸಕರು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ.

--------

* ಕೂಡ್ಲಿಗಿ ಕ್ಷೇತ್ರದಲ್ಲಿ ವಸತಿ ರಹಿತರನ್ನು ಗುರುತಿಸಿ ಮನೆಗಳ ನಿರ್ಮಾಣಕ್ಕೆ ಒತ್ತು.

* ಕೂಡ್ಲಿಗಿ ಕ್ಷೇತ್ರಕ್ಕೆ ಕೆಪಿಎಸ್‌ ಶಾಲೆಗಳು ಮಂಜೂರಾಗಿವೆ. ಇವುಗಳ ಪ್ರಾರಂಭಕ್ಕೆ ಆದ್ಯತೆ ನೀಡುವೆ.

* ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಕೇಂದ್ರಗಳ ಪ್ರಾರಂಭಿಸಲಾಗುವುದು.

* ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹೋಗಲು ಕ್ರಮ ವಹಿಸಲಾಗುವುದು. ಈ ಮೂಲಕ ಯೋಜನೆ ಸಫಲಗೊಳಿಸಲಾಗುವುದು.

* ವಿದ್ಯುತ್‌ ಸಬ್‌ ಸ್ಟೇಶನ್‌ಗಳ ಉನ್ನತೀಕರಣಕ್ಕೆ ಆದ್ಯತೆ ನೀಡುವೆ. ರೈತರಿಗೆ ವಿದ್ಯುತ್‌ ಇಲಾಖೆಯಿಂದ ಹೆಚ್ಚುವರಿ ಟಿಸಿಗಳ ಅಳವಡಿಕೆಗೆ ಕ್ರಮವಹಿಸುವೆ.

-ಡಾ. ಎನ್‌.ಟಿ. ಶ್ರೀನಿವಾಸ್‌, ಶಾಸಕರು ಕೂಡ್ಲಿಗಿ ಕ್ಷೇತ್ರ.

* ಹರಪನಹಳ್ಳಿಯಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡುವೆ.

* ಎಲ್ಲ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸುವೆ.

* ಗರ್ಭಗುಡಿ ಬ್ರೀಜ್‌ ಕಂ ಬ್ಯಾರೇಜ್‌ ಪೂರ್ಣಗೊಳಿಸುವೆ.

* ಹರಪನಹಳ್ಳಿ ನಗರದಲ್ಲಿ ಬಾಕಿ ಉಳಿದಿರುವ 12 ಸಾವಿರ ಮನೆಗಳಿಗೆ ನದಿ ನೀರು ಸರಬರಾಜಿಗೆ ಆದ್ಯತೆ ನೀಡುವೆ.

* ಹರಪನಹಳ್ಳಿಯಲ್ಲಿ ಒಳ ಚರಂಡಿ ಸಮಸ್ಯೆ ಸರಿಪಡಿಸುವೆ. ಗ್ರಾಮೀಣ ಭಾಗದಲ್ಲೂ ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಡುವೆ.

-ಎಂ.ಪಿ. ಲತಾ ಶಾಸಕರು, ಹರಪನಹಳ್ಳಿ ಕ್ಷೇತ್ರ.

*ರೈತರ ಒಳಿತಿಗಾಗಿ ನೀರಾವರಿ ಯೋಜನೆಗಳ ಸಾಕಾರಕ್ಕೆ ಮೊದಲ ಆದ್ಯತೆ ನೀಡುವೆ.

* ಶಾಲೆ, ಕಾಲೇಜು, ಅಂಗನವಾಡಿಗಳ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ವಹಿಸುವೆ.

* ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವೆ.

* ಪ್ರಾಥಮಿಕ ಆರೋಗ್ಯ ಕ್ಷೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡುವೆ.

* ವಿದ್ಯುತ್‌ ಸಬ್‌ ಸ್ಟೇಶನ್‌ಗಳ ಉನ್ನತೀಕರಣಕ್ಕೆ ಒತ್ತು ನೀಡುವೆ. ವಿದ್ಯುತ್‌ ಪರಿವರ್ತಕಗಳ ಸಮಸ್ಯೆಗಳನ್ನು ಪರಿಹರಿಸುವೆ.

-ಕೃಷ್ಣ ನಾಯ್ಕ, ಶಾಸಕರು ಹಡಗಲಿ ಕ್ಷೇತ್ರ.

* ಹೊಸಪೇಟೆ ರೈತರ ಒಳಿತಿಗಾಗಿ ಕಾರಿಗನೂರಿನಿಂದ ಭುವನಹಳ್ಳಿಯವರೆಗೆ 17 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿಗೆ 3 ಟಿಎಂಸಿ ನೀರು ಒದಗಿಸುವ ಯೋಜನೆ ರೂಪಿಸಲಾಗುವುದು.

* ವಿಜಯನಗರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವೆ.

* ಹಂಪಿ ಪ್ರವಾಸೋದ್ಯಮದ ಬೆಳವಣಿಗೆಗಾಗಿ ಪರಿಕ್ರಮ ಯೋಜನೆ ರೂಪಿಸಿ ಪ್ರವಾಸಿಗರ ಸ್ನೇಹಿ ಯೋಜನೆ ರೂಪಿಸುವೆ.

* ಆರೋಗ್ಯ ದೃಷ್ಟಿಕೋನದಿಂದ ಜಿಲ್ಲಾಸ್ಪತ್ರೆಯನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ಎಸ್‌ಡಿಎಂನವರ ಜೊತೆಗೆ ಚರ್ಚಿಸಿರುವೆ.

* ಶಿಕ್ಷಣಕ್ಕಾಗಿ ಕ್ಷೇತ್ರದಲ್ಲಿ ಈಗಾಗಲೇ ಆದ್ಯತೆ ನೀಡಿದ್ದು, ಸ್ಮಾರ್ಟ್‌ ಕ್ಲಾಸ್‌ಗಳ ಸಾಕಾರಕ್ಕೆ ಕ್ರಮವಹಿಸಿರುವೆ.ಎಚ್‌.ಆರ್‌. ಗವಿಯಪ್ಪ, ಶಾಸಕರು ವಿಜಯನಗರ ಕ್ಷೇತ್ರ.

* ಹೊಸಪೇಟೆ ನಗರದ ಸುಂದರೀಕರಣಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವೆ.* ಹೊಸಪೇಟೆ ನಗರದ ಪ್ರತಿ ವಾರ್ಡ್‌ಗಳಲ್ಲೂ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮವಹಿಸುವೆ.

* ಹೊಸಪೇಟೆ ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವೆ.

* ನಗರದಲ್ಲಿ ಬೀದಿದೀಪಗಳ ಸಮಸ್ಯೆ ಪರಿಹರಿಸುವೆ.

* ಪ್ರಮುಖ ಪ್ರವಾಸಿ ತಾಣ ಆಗಿರುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಕ್ರಮವಹಿಸುವೆ.

ರೂಪೇಶ್‌ಕುಮಾರ, ಅಧ್ಯಕ್ಷರು ನಗರಸಭೆ ಹೊಸಪೇಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ