ಪ್ರತಿ ವ್ಯಕ್ತಿಯಲ್ಲೂ ಮನುಷ್ಯತ್ವ ಇರಲಿ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಗೋಕಾಕ ಚಳವಳಿ ಸಂದರ್ಭ ನನ್ನ ಹಾಗೂ ಚಂದ್ರಕಾಂತ ಬೆಲ್ಲದ ಅವರ ಪರಿಚಯವಾಗಿದ್ದು, ಆವತ್ತಿನಿಂದ ಮನುಷ್ಯ ಸಂಬಂಧ ಬೆಳೆದಿದೆ. ಬಸವಣ್ಣನವರ ತತ್ವ, ಆದರ್ಶಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಚಂದ್ರಕಾಂತ ಅವರು ಬಸವತತ್ವದ ಪ್ರತಿಪಾದಕರು. ನಾನು ಕೂಡ ಬಸವಣ್ಣನವರ ಅನುಯಾಯಿ. ಆಗಿನಿಂದಲೂ ಚಂದ್ರಕಾಂತ ನನ್ನ ಬಗ್ಗೆ ಅಪಾರ ಪ್ರೀತಿ, ಗೌರವ ತೋರಿಸುತ್ತಾರೆ.

- ಚಂದ್ರಕಾಂತ ಬೆಲ್ಲದ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪ್ರತಿ ವ್ಯಕ್ತಿಯಲ್ಲೂ ಮನುಷ್ಯತ್ವ ಇರಬೇಕು. ಪರಸ್ಪರ ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಜಾತಿ, ಧರ್ಮದವರನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಈ ಗುಣ ಚಂದ್ರಕಾಂತ ಬೆಲ್ಲದ ಅವರಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಧಾರವಾಡ ನಗರದ ಅಂಬರೈ ಗಾರ್ಡನ್ ಲಾನ್‌ನಲ್ಲಿ ಶನಿವಾರ ಚಂದ್ರಕಾಂತ ಬೆಲ್ಲದ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗೋಕಾಕ ಚಳವಳಿ ಸಂದರ್ಭ ನನ್ನ ಹಾಗೂ ಚಂದ್ರಕಾಂತ ಬೆಲ್ಲದ ಅವರ ಪರಿಚಯವಾಗಿದ್ದು, ಆವತ್ತಿನಿಂದ ಮನುಷ್ಯ ಸಂಬಂಧ ಬೆಳೆದಿದೆ. ಬಸವಣ್ಣನವರ ತತ್ವ, ಆದರ್ಶಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಚಂದ್ರಕಾಂತ ಅವರು ಬಸವತತ್ವದ ಪ್ರತಿಪಾದಕರು. ನಾನು ಕೂಡ ಬಸವಣ್ಣನವರ ಅನುಯಾಯಿ. ಆಗಿನಿಂದಲೂ ಚಂದ್ರಕಾಂತ ನನ್ನ ಬಗ್ಗೆ ಅಪಾರ ಪ್ರೀತಿ, ಗೌರವ ತೋರಿಸುತ್ತಾರೆ ಎಂದು ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು.

ರಾಮಕೃಷ್ಣ ಹೆಗಡೆಯವರ ನಾಯಕತ್ವ ಅಪ್ಪಿಕೊಂಡ ಒಬ್ಬ ಅಪರೂಪದ ರಾಜಕಾರಣಿ ಬೆಲ್ಲದ. ಅವರ ಮಾತಿನಿಂದ ಯಾರೊಬ್ಬರಿಗೂ ನೋವುಂಟಾಗಿಲ್ಲ. ಇದು ಮನುಷ್ಯನ ಗುಣ. ಈ ಗುಣ ಇದ್ದರೆ ಸಮಾಜ ನಮ್ಮನ್ನು ಪ್ರೀತಿಸುತ್ತದೆ. ವೈರಿಗಳನ್ನು ಪ್ರೀತಿಸುವ ಗುಣವನ್ನು ಬೆಲ್ಲದ ಬೆಳೆಸಿಕೊಂಡಿದ್ದಾರೆ. ಅವರು ಬದುಕನ್ನು, ಸಮಾಜವನ್ನು ಪ್ರೀತಿಸುತ್ತಾರೆ. ಇದು ಎಲ್ಲರಲ್ಲೂ ಇರುವುದಿಲ್ಲ ಎಂದು ಬಣ್ಣಿಸಿದರು.

ನಾವೆಲ್ಲರೂ ವಿಶ್ವಮಾನವ ಆಗಲು ಸಾಧ್ಯವಾಗದಿರಬಹುದು. ಆದರೆ, ವಿಶ್ವಮಾನವರಾಗುವ ದಾರಿಯಲ್ಲಿ ಬೆಳೆಯಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದ ಆಸಕ್ತಿಯ ಜತೆಗೆ ಅನ್ಯಾಯವನ್ನು ಖಂಡಿಸಿ ಹೋರಾಟ ಮಾಡುವ ಮನೋಭಾವನೆ ಚಂದ್ರಕಾಂತ ಬೆಲ್ಲದ ಅವರದ್ದು. ಇದೀಗ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದಾರೆ. ಇವರ ನೇತೃತ್ವದಲ್ಲಿ ಸಂಘ ಇನ್ನಷ್ಟು ಬೆಳೆಯಲಿ. ಹುಟ್ಟು ಸಾವಿನ ನಡುವಿನ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುವುದೇ ಮುಖ್ಯವಾಗಿದೆ. ಸಮಾಜಕ್ಕೆ, ಸಮಾಜದ ಬದಲಾವಣೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇಷ್ಟು ವರ್ಷಗಳ ಕಾಲ ನೀವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಈ ಕಾರ್ಯಗಳಿಗೆ ಸಮಾಜದ ಬದಲಾವಣೆಗೆ ಮುಂದೆಯೂ ಸಮಾಜಮುಖಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ ಮಾತನಾಡಿ, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ರಸ್ತೆ ಬದಿ ವ್ಯಾಪಾರ ಮಾಡಿ, ಶ್ರದ್ಧೆಯಿಂದ ಕಾಯಕ ಮಾಡಿ, ಉದ್ಯಮಿ, ಶಾಸಕರಾಗಿ, ಕ್ರಿಯಾಶೀಲ ನಾಗರಿಕರಾಗಿ ಕೆಲಸ ಮಾಡಿರುವ ಚಂದ್ರಕಾಂತ ಬೆಲ್ಲದ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

ಮನುಷ್ಯನಲ್ಲಿ ಸಾಧಿಸುವ ಛಲ, ಪ್ರಾಮಾಣಿಕತೆ, ಇದ್ದರೆ ಎತ್ತರಕ್ಕೆ ಬೆಳೆಯುತ್ತಾನೆ. ಅದಕ್ಕೆ ಚಂದ್ರಕಾಂತ ಬೆಲ್ಲದ ಉದಾಹರಣೆ. ಟಿಕೆಟ್ ದೊರೆಯದಿದ್ದಾಗ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದವರು ಚಂದ್ರಕಾಂತ ಬೆಲ್ಲದ. ಜನರ ಬೆಂಬಲವೇ ಇದಕ್ಕೆ ಸಾಕ್ಷಿ. ರಾಜಕೀಯ ಕ್ಷೇತ್ರಕ್ಕೆ ಬಂದ ನಂತರ ಮಂತ್ರಿಯಾಗಬೇಕಿತ್ತು. ಅವಕಾಶ ದೊರೆಯಲಿಲ್ಲ. ಇಷ್ಟಾದರೂ ಅವರು ತಾಳ್ಮೆ ಕಳೆದುಕೊಳ್ಳದೆ ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಗದಗಿನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀ, ಧಾರವಾಡದ ಮುರಾಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದದೇವರು ಸಾನ್ನಿಧ್ಯ ವಹಿಸಿದ್ದರು.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಹೇಶ ಟೆಂಗಿನಕಾಯಿ, ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಸಾಹಿತಿಗಳಾದ ಗೊ.‌ರು. ಚನ್ನಬಸಪ್ಪ, ರಂಜಾನ್ ದರ್ಗಾ, ಶಂಕರ ಹಲಗತ್ತಿ, ವೀರಣ್ಣ ರಾಜೂರ, ನಾ. ಮೊಗಸಾಲೆ, ದಿವಾಕರ ಹೆಗಡೆ, ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಉಪಸ್ಥಿತರಿದ್ದರು.

ಶಾಸಕ ಅರವಿಂದ ಬೆಲ್ಲದ ತಂದೆ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ "ಬೆಲ್ಲದಚ್ಚು ಅಭಿನಂದನ ಗ್ರಂಥ ", "ಅಲ್ಲಮನ ಅಧ್ಯಯನ ಲೋಕ ", "ದೊಡ್ಡ ಹೊಳೆ ದಾಟಿದವರು " ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಮಹಾನಗರ ಪಾಲಿಕೆ ಮೇಯರ್‌ ವೀಣಾ ಬರದ್ವಾಡ, ಪ್ರಮುಖರಾದ ಸಿ.ಆರ್‌. ರಾಮಮೂರ್ತಿ, ಬಸವರಾಜ ಅಮ್ಮಿನಬಾವಿ ಸೇರಿದಂತೆ ಮತ್ತಿತರರಿದ್ದರು.

ಈ ವೇಳೆ ಚಂದ್ರಕಾಂತ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ವಕೀಲ ಬಸವಪ್ರಭು ಹೊಸಕೇರಿ ಸ್ವಾಗತಿಸಿದರು. ಬಸವಂತಪ್ಪ ತೋಟದ ವಚನಗಾಯನ ಮಾಡಿದರು.

Share this article