ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಡಾ. ಲಮಾಣಿ ಎಚ್ಚರಿಕೆ ಲಕ್ಷ್ಮೇಶ್ವರ: ತಾಲೂಕಿನಲ್ಲಿ ಭೀಕರ ಬರಗಾಲ ಇರುವುದರಿಂದ ಮುಂದಿನ 4-5 ತಿಂಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವ ಗ್ರಾಮಗಳಿಗೆ ತುಂಗಭದ್ರಾ ನದಿಯ ಕುಡಿಯುವ ನೀರು ಕೊಡಲು ಸಾಧ್ಯವಿಲ್ಲವೋ ಆ ಗ್ರಾಮಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸುವ ಮೂಲಕ ಅಲ್ಲಿನ ಜನರಿಗೆ ಕುಡಿಯುವ ನೀರು ತಲುಪಿಸುವ ಕಾರ್ಯವಾಗಬೇಕು. ಜೆಜೆಎಂ ಕಾಮಗಾರಿಗಳ ಮೂಲಕ ಕುಡಿಯುವ ನೀರು ಪೂರೈಸುವ ಕಾರ್ಯ ಯಾವ ಹಂತದಲ್ಲಿ ಇದೆ. ಯಾವ ಗ್ರಾಮಗಳಿಗೆ ಡಿಬಿಓಟಿ ಮೂಲಕ ಕುಡಿಯುವ ನೀರು ಕೊಡಲು ಯಾವ ತಯಾರಿ ಮಾಡಿಕೊಂಡಿದ್ದೀರಿ ಎನ್ನುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಶಿಗ್ಲಿ, ಗೊಜನೂರ, ಅಕ್ಕಿಗುಂದ ತಾಂಡಾ, ಯಳವತ್ತಿ ಯತ್ತಿನಹಳ್ಳಿ, ಆದ್ರಳ್ಳಿ ಮಾಡಳ್ಳಿ, ಗೋವನಾಳ ಹಾಗೂ ಬಸಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಅಧಿಕಾರಿ ಸಂತೋಷ ಲಮಾಣಿ ಅವರಿಗೆ ಸೂಚನೆ ನೀಡಿದರು. ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಗಳು ಬಹಳಷ್ಟು ಹಳೆಯದಾಗಿದ್ದು ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿರುವುದರಿಂದ 15 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಹೊಸ ಪೈಪ್ ಲೈನ್ ಹಾಕುವ ಕುರಿತಂತೆ ಕ್ರೀಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಬಂದ ನಂತರ ಹೊಸ ಪೈಪ್ ಲೈನ್ ಹಾಕುವ ಕಾರ್ಯ ಮಾಡಲಾಗುವುದು. ಅಲ್ಲದೆ ಡಿಬಿಓಟಿ ಮೂಲಕ ಬಸ್ತಿಬಣಕ್ಕೆ ನೀರು ಪೂರೈಸಿದಲ್ಲಿ ಪಟ್ಟಣದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು. ಈ ವೇಳೆ ಪಶು ವೈದ್ಯಾಧಿಕಾರಿ ಡಾ.ಎನ್.ವಿ. ಹವಳದ ಅವರು ಮಾತನಾಡಿ, ತಾಲೂಕಿನ ಜಾನುವಾರುಗಳಿಗೆ 2 ತಿಂಗಳು ಆಗುವಷ್ಟು ಮೇವಿನ ಸಂಗ್ರಹವಿದೆ, ತಾಲೂಕಿನ ರೈತರು ಹಿಂಗಾರು ಹಂಗಾಮಿನಲ್ಲಿನ ಬಿಳಿಜೋಳ, ಕಡಲೆ ಹಾಗೂ ಗೋಧಿ ಬಿತ್ತನೆ ಮಾಡಿದ್ದು ಅವುಗಳಿಂದ ಸ್ವಲ್ಪ ಮೇವಿನ ತೊಂದರೆ ಸರಿದೂಗಿಸಬಹುದಾಗಿದೆ. ಅಲ್ಲದೆ ಬರಗಾಲ ಘೋಷಣೆಯಾಗಿದ್ದರಿಂದ ತಾಲೂಕಿನ ಶೆಟ್ಟಿಕೇರಿ ಕೆರೆಯಲ್ಲಿ ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ, ತಾಲೂಕಿನಲ್ಲಿ ಬಾಲೆಹೊಸೂರ ಗ್ರಾಮದಲ್ಲಿ ಹೆಚ್ಚು ಜಾನುವಾರುಗಳು ಇದ್ದು ಅಲ್ಲಿಯೂ ಗೋಶಾಲೆ ತೆರೆಯುವ ಮೂಲಕ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಹೆಚ್ಚು ಅನುಕೂಲವಾಗುತ್ತದೆ ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಹೋಗಿ ವಿಸ್ತೃತ ವರದಿ ತಯಾರಿಸಿ ಸಲ್ಲಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು. ಲಕ್ಷ್ಮೇಶ್ವರ ತಾಲೂಕಿನ 8395 ರೈತರಿಗೆ ಬೆಳೆ ವಿಮೆಯ ಮಧ್ಯಂತರ ಪರಿಹಾರವಾಗಿ ಸುಮಾರು 8.87 ಕೋಟಿ ಹಣವನ್ನು ವಿಮಾ ಕಂಪನಿ ಬಿಡುಗಡೆ ಮಾಡಿದ್ದು, ತಾಲೂಕಿನ ಶೇಂಗಾ, ಈರುಳ್ಳಿ, ಗೋವಿನ ಜೋಳ ಹಾಗೂ ಹತ್ತಿ ಬೆಳೆಗೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರಲ್ಲಿದೆ ಮುಂದಿನ ಹಂತದಲ್ಲಿ ಮೆಣಸಿನಕಾಯಿ ಹಾಗೂ ಇನ್ನುಳಿದ ಬೆಳೆಗಳಿಗೆ ಪರಿಹಾರದ ಹಣವನ್ನು ನೀಡುವ ಕಾರ್ಯವನ್ನು ಮಾಡಲಾಗುವುದು. ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಬೆಳಗೆ ಸುಮಾರು 99 ಲಕ್ಷ ಹಣವನ್ನು ಈಗಾಗಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಹೇಳಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ಪುರಸಭೆಯ ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದ ತಂಡವು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ.ಅದರಲ್ಲಿ ಯಾವುದೇ ಲೋಪವಾದರೂ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಹೇಳಿದರು. ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ ಅಮಾಸಿ, ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕೃಷಿ ಇಲಾಖೆಯ ಅಧಿಕಾರಿ ರೇವಣೆಪ್ಪ ಮನಗೂಳಿ, ತೋಟಗಾರಿಕಾ ಇಲಾಖೆಯ ಸುರೇಶ ಕುಂಬಾರ, ಎಪಿಎಂಸಿ ಕಾರ್ಯದರ್ಶಿ ಶಿವಾನಂದ ಮಠ, ಬಸವರಾಜ ತೋಟದ, ಮಾರುತಿ ನಾಯಕ್ ಇದ್ದರು.