ಶಿರಸಿಯಲ್ಲಿ ಶ್ರೀಮಾರಿಕಾಂಬಾ ಜಾತ್ರೆ ಹಿನ್ನೆಲೆ ವಿಶೇಷ ತುರ್ತು ಸಭೆ
ಶಿರಸಿಯಲ್ಲಿ ಶ್ರೀಮಾರಿಕಾಂಬಾ ಜಾತ್ರೆಯು ಫೆ. ೨೪ರಿಂದ ೧೦ ದಿನ ನಡೆಯಲಿದ್ದು ಈ ವೇಳೆ ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ, ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳದಿಂದ ಕಾರವಾರದವರೆಗಿನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿಯೂ ಸಂಚಾರ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಅಧ್ಯಕ್ಷತೆಯಲ್ಲಿ ವಿಶೇಷ ತುರ್ತು ಸಭೆ ತಾಲೂಕು ಸೌಧದಲ್ಲಿ ಭಾನುವಾರ ನಡೆಯಿತು.
ಸಂಸದರು ಮಾತನಾಡಿ, ಶಿರಸಿ ಜಾತ್ರೆ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಜಕರು ಆಗಮಿಸುವುದರಿಂದ ಉಳಿದೆಲ್ಲಾ ವ್ಯವಸ್ಥೆಗಳ ಜತೆಗೆ ಸಂಚಾರ ಸಮಸ್ಯೆ ಉದ್ಭವಿಸದಂತೆ ಸುಲಲಿತಗೊಳಿಸುವುದು ಅತ್ಯಗತ್ಯವಿದೆ. ಹೀಗಾಗಿ ಪ್ರತಿಯೊಂದ ಹೆದ್ದಾರಿಯಲ್ಲಿ ನಡೆದಿರುವ ಕಾಮಗಾರಿಗಳ ಸದ್ಯದ ಸ್ಥಿತಿಗತಿ ವಿವರಿಸುವಂತೆ ಮೂರೂ ಕಾಮಗಾರಿ ಗುತ್ತಿಗೆ ಕಂಪನಿಗಳಿಗೆ ಸೂಚಿಸಿದರು.ಶಿರಸಿ-ಹಾವೇರಿ ಹೆದ್ದಾರಿಯ ಒಂದು ಭಾಗದಲ್ಲಿ ೧೦-೧೨ ಅಡಿ ತಗ್ಗು ತೆಗೆದು ಕಾಮಗಾರಿ ನಡೆಸಲಾಗಿರುವುದನ್ನು ಪ್ರಸ್ತಾಪಿಸಿದ ಸಂಸದರು, ಇದು ಜಾತ್ರೆ ವೇಳೆಯಲ್ಲಿ ಸಮಸ್ಯೆಗೆ ಕಾರಣವಾಗಲಿದ್ದು, ಕೂಡಲೇ ಸರಿಪಡಿಸುವಂತೆ ಗುತ್ತಿಗೆದಾರ ಅಮ್ಮಾಪುರ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ೧೦-೧೨ ದಿನದಲ್ಲಿ ರಸ್ತೆ ಸಮತಟ್ಟು ಮಾಡುವ ಭರವಸೆ ಗುತ್ತಿಗೆಯವರು ನೀಡಿದರು. ಈ ಮಾರ್ಗದಲ್ಲಿ ೩೫ ಕಿ.ಮೀ ನಷ್ಟು ರಸ್ತೆ ಕಾಮಗಾರಿ ಬಾಕಿ ಇದ್ದು, ಅದರಲ್ಲಿ ೨೨ ಕಿಮೀ ಶಿರಸಿ ತಾಲೂಕಿನಲ್ಲಿ ೧೩ ಕಿಮೀ ಹಾವೇರಿ ಭಾಗದಲ್ಲಿ ಬಾಕಿ ಇರುತ್ತದೆ. ಜಾತ್ರೆ ಪೂರ್ವದಲ್ಲಿ ಇನ್ನೂ ೧೦ ಕಿಮೀ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಉಳಿದ ಭಾಗವನ್ನು ಜಾತ್ರೆ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನಿರ್ವಹಿಸುವುದಾಗಿ ತಿಳಿಸಿದರು.
ಈ ರಸ್ತೆಯಲ್ಲಿ ಅತಿಯಾದ ಧೂಳಿನಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಜಾತ್ರೆಗೆ ಬರುವ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುವುದರಿಂದ ಧೂಳು ಹಾರದಂತೆ ನೀರಿನ ಚಿಕಿತ್ಸೆ ಮಾಡಲೇಬೇಕು ಎಂದು ಸಂಸದರು ಸೂಚಿಸಿದರು. ರಸ್ತೆಯ ನಡುವೆ ವಾಹನ ಸಂಚಾರ ಸುರಕ್ಷತೆಗೂ ಗುತ್ತಿಗೆಯವರೇ ಕ್ರಮವಹಿಸಿಬೇಕು. ಅರೆಬರೆ ಮಾಡಿ ಅಪಾಯಕಾರಿ ಕಾಮಗಾರಿ ಮಾಡಿಡುವಂತಿಲ್ಲ ಎಂದು ಸಂಸದರು ಕಟ್ಟುನಿಟ್ಟಾಗಿ ಸೂಚಿಸಿದರು. ಹಾಗೆಯೇ ಶಿರಸಿ ಪಟ್ಟಣದೊಳಗೂ ರಸ್ತೆಯ ಹೊಂಡಗಳನ್ನು ಮುಚ್ಚುವದಕ್ಕೂ ಆದ್ಯತೆ ಕೊಡಿ ಎಂದರು.ಕುಮಟಾ-ಶಿರಸಿ ರಾ.ಹೆ-೭೬೬(ಇ)ಯ ಶಿರಸಿ ಭಾಗದಲ್ಲಿ ಬಹುಪಾಲು ಮುಕ್ತಾಯವಾಗಿದ್ದು, ಎಲ್ಲಾ ಬ್ರಿಜ್, ಕಲ್ವರ್ಟ್, ಸಿ.ಡಿಗಳು ಪೂರ್ಣಗೊಂಡಿದೆ. ಕುಮಟಾ ಭಾಗದಲ್ಲಿ ಸ್ವಲ್ಪ ಬಾಕಿ ಇದೆ. ಕೊಡಂಬಳೆಯಲ್ಲಿ ನೀರಿನ ಹರಿವಿನ ಜಾಗದಲ್ಲಿರುವ ಭಾಗದ ಮಾಲೀಕರ ಕಡೆಯಿಂದ ಭೂಸ್ವಾಧೀನವೊಂದು ಈಗ ಬೆಳಕಿಗೆ ಬಂದಿದೆ ಎಂದು ಆರ್.ಎನ್. ಶೆಟ್ಟಿ ಕಂಪನಿಯ ನಿತೀಶ ಶೆಟ್ಟಿ ತಿಳಿಸಿದಾಗ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಂಸದರು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರಗೆ ಸೂಚಿಸಿದರು.ಕರಾವಳಿಯ ಎಲ್ಲ ಜಿಲ್ಲೆಗಳಿಂದ ಜಾತ್ರೆಗೆ ಜನರು ಬರುವುದರಿಂದ ಈ ರಸ್ತೆಯೂ ಅತ್ಯಂತ ಮಹತ್ವದ್ದಾಗಿದೆ. ಎಲ್ಲಿಯೂ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ಆರ್‌ಎನ್‌ಎಸ್‌ಗೆ ಸಂಸದರು ತಿಳಿಸಿದರು. ಸದ್ಯ ಬಸ್ ಓಡಾಡುತ್ತಿರುವದರಿಂದ ರಸ್ತೆಯ ಪರಿಸ್ಥಿತಿ ಖುದ್ದು ತಿಳಿದುಕೊಂಡು ಈ ಮಾರ್ಗದಲ್ಲಿ ನಾಳೆಯಿಂದಲೇ ಟ್ಯಾಂಕರ್, ಕ್ಯಾಂಟರ್ ಮುಂತಾದ ಭಾರೀ ವಾಹನಗಳನ್ನೂ ಓಡಿಸಲು ಆದೇಶಿಸುವಂತೆ ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು.
ರಾ.ಹೆದ್ದಾರಿ ೬೬ ಚತುಷ್ಪಥ ಕಾಮಗಾರಿಯು ೨೦೧೪ ರಲ್ಲಿ ಆರಂಭವಾದರೂ ತೀರಾ ನಿಧಾನಗತಿಯಿಂದ ಬೇಸರತರಿಸಿದೆ. ಭಟ್ಕಳ ಶಹರದಲ್ಲಿ ನೀರು ಕೆಳಗೆ ಹರಿಯುವ ಬದಲು ಮೇಲ್ಗಡೆ ಹರಿಯುವಂತೆ ಮಾಡಲಾಗಿದೆ. ಭಟ್ಕಳ ಪಟ್ಟಣ ವ್ಯಾಪ್ತಿಯ ಕಾಮಗಾರಿ ಬೇಗ ಮುಗಿಸಬೇಕು. ಸೇತುವೆಗಳ ಕಥೆಯೇನು ಎಂದು ಸಂಸದರು ಪ್ರಶ್ನಿಸಿದಾಗ, ಉತ್ತರಿಸಿದ ಐಆರ್‌ಬಿ ಇಂಜಿನಿಯರ್ ವೆಂಕಟ್ರಮಣ ಹೆಗಡೆ, ವೆಂಕಟಾಪುರ ಬ್ರಿಜ್ ತೆರವು ಕಾರ್ಯಾಚರಣೆಯನ್ನು ಸದ್ಯ ನಡೆದಿರುವ ಆರಾಟೆ ಬ್ರಿಜ್ ತೆರವಿನ ಬಳಿಕ ನಡೆಯಲಿದೆ ಎಂದರು.ಶಾಸಕ ದಿನಕರ ಶೆಟ್ಟಿ, ಹೊನ್ನಾವರ ಹಳೆ ಸೇತುವೆ ಮೇಲೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಓಡಾಟಕ್ಕೆ ಕ್ರಮವಾಗಲಿ ಎಂದರು. ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಐಆರ್‌ಬಿ ನಿಧಾನಗತಿಯ ಕಾಮಗಾರಿಗೆ ಸಂಸದ ಹಾಗೂ ಶಾಸಕರು ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಎಂಜಿನಿಯರ್ ವೆಂಕಟ್ರಮಣ ಹೆಗಡೆ, ಹೆದ್ದಾರಿಯ ಅಂಚಿಗೆ ಹಾಕಲಾಗಿರುವ ಕುಡಿಯುವ ನೀರಿನ ಪೈಪ್‌ಗಳು ಕಾಮಗಾರಿಗೆ ದೊಡ್ಡ ತೊಡಕಾಗಿವೆ ಎಂದರು. ಉಳಿದಂತೆ ಮಾನೀರ ಬಳಿ ಸೇತುವೆ ಕಾಮಗಾರಿ ಆರಂಭಗೊಳ್ಳಬೇಕಿದ್ದು, ಹೊನ್ಮಾಂವ ಸೇತುವೆ ಪ್ರಗತಿಯಲ್ಲಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್-೨ ಸತೀಶ ಗೌಡ, ಐ.ಆರ್.ಬಿ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಇತರರು ಇದ್ದರು.