ಪಟಾಕಿ ಮಾರಾಟ, ಬಳಕೆಯಲ್ಲಿ ಸುರಕ್ಷತೆ ಇರಲಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ

KannadaprabhaNewsNetwork |  
Published : Oct 19, 2024, 12:19 AM IST
(ಪೊಟೋ 18ಬಿಕೆಟಿ8, ದೀಪಾವಳಿ ಹಬ್ಬದ ನಿಮಿತ್ಯ  ಜಿಲ್ಲೆಯಾದ್ಯಂತ ಮುಂಜಾಗ್ರತ ಕ್ರಮವಾಗಿ ಪಟಾಕಿ ಸಂಗ್ರಹಣೆ ಹಾಗೂ ಮಾರಾಟ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ) | Kannada Prabha

ಸಾರಾಂಶ

ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮವಾಗಿ ಪಟಾಕಿ ಸಂಗ್ರಹಣೆ ಹಾಗೂ ಮಾರಾಟ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಂಗ್ರಹಿಸುವ ಮತ್ತು ಮಾರಾಟ ಮಾಡುವ ವೇಳೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ನಡೆದ ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಪಟಾಕಿ ಸಂಗ್ರಹಣೆ ಹಾಗೂ ಮಾರಾಟ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಡೆಯುವ ಉದ್ದೇಶ ಹಾಗೂ ಪಟಾಕಿ ಮಾರಾಟ ಮತ್ತು ಬಳಕೆ ನಿಯಂತ್ರಿಸಲು ಸರ್ಕಾರದ ನಿರ್ದೇಶನದಂತೆ ಜಿಲ್ಲಾ, ಉಪ ವಿಭಾಗ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈ ತಂಡಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪಟಾಕಿ ಸನ್ನದ್ದುದಾರರ ಮಾರಾಟ ಹಾಗೂ ಸಂಗ್ರಹಣೆ ಮಾಡಿರುವ ಅಂಗಡಿಗಳನ್ನು ಪರಿಶೀಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ. ಸನ್ನದ್ದುದಾರರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದರು.

ಮಾರಾಟಗಾರರು ಸುರಕ್ಷತಾ ದೃಷ್ಟಿಯಿಂದ ಎರಡು ಪಟ್ಟು ಸುರಕ್ಷತಾ ಕ್ರಮ ಅಳವಡಿಸಿಕೊಂಡಿರಬೇಕು. ಅಧಿಕೃತ ಪರವಾನಗಿ ಹೊಂದಿರಲೇಬೇಕು. ಜನವಸತಿ ರಹಿತ ಸ್ಥಳದಲ್ಲಿ ಪಟಾಕಿ ಮಳಿಗೆ ಹಾಕುವ ವ್ಯವಸ್ಥೆಯಾಗಬೇಕು. ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿ ಹೊರತುಪಡಿಸಿ ಇನ್ಯಾವುದೇ ಪಟಾಕಿ ಮಾರಾಟ ಮಾಡುವಂತಿರುವದಿಲ್ಲ. ಪಟಾಕಿ ಮಳಿಗೆ ಮುಂಭಾಗದಲಿ ಧೂಮಪಾನ ನಿಷೇಧಿಸಿದೆ ಎಂಬ ಫಲಕ ಹಾಗೂ ಅಗ್ನಿಶಾಮಕ ಠಾಣೆ ಮತ್ತು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ಸೂಚನೆ ಫಲಕ ಹಾಕಬೇಕು ಎಂದರು.

ನಿಷೇಧಿತ ಪಟಾಕಿಗಳ ದಾಸ್ತಾನು ಮಾಡಿದಲ್ಲಿ ಅಂತಹ ಮಳಿಗೆ ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ಹೂಡಲಾಗುವುದು. ಪಟಾಕಿಗಳನ್ನು ಹಗಲಿನ ವೇಳೆ ಮಾತ್ರ ಮಾರಾಟ ಮಾಡಬೇಕು ಮತ್ತು ರಾತ್ರಿ ವೇಳೆಯಲ್ಲಿ ಮಳಿಗೆಯಲ್ಲಿ ಯಾರೂ ಮಲಗಲು ಅವಕಾಶ ನೀಡತಕ್ಕದ್ದಲ್ಲ ಎಂದು ಎಚ್ಚರಿಸಿದರು.

ಶುಭ ದೀಪಾವಳಿ ಆಚರಿಸಬೇಕೆಂದಲ್ಲಿ ಜನರಲ್ಲಿ ಪಟಾಕಿ ಸಿಡಿಸುವಾಗ ವಹಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಕೂಡ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷದಕಿಂತ ಹೆಚ್ಚಿನ ಮಟ್ಟದ ಸುರಕ್ಷತಾ ಕ್ರಮಗಳ ಕುರಿತ ಅರಿವು ಮೂಡಿಸುವ ಕಾರ್ಯ ಮಾಡಿರಿ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ , ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಜಿಲ್ಲೆಯ ಎಲ್ಲ ತಹಸೀಲ್ದಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ