ದೇಶ ಆರ್ಥಿಕತೆಯೊಂದಿಗೆ ಸಾಮಾಜಿಕ ಪ್ರಗತಿ ಹೊಂದಲಿ

KannadaprabhaNewsNetwork | Updated : Dec 23 2023, 01:46 AM IST

ಸಾರಾಂಶ

ಸಹಕಾರಿಗಳು ಎಂದಿನ ಸಾಂಪ್ರದಾಯಿಕ ಕಾರ್ಯಗಳ ಜತೆಗೆ ಹೊಸ ಯೋಜನೆ ಮುಖಾಂತರ ಬದಲಾವಣೆ ತಂದು ಲಾಭದಾಯಕ ಸಂಸ್ಥೆಗಳಾಗಿ ಮುಂದುವರಿಯಬೇಕು

ಶಿರಸಿ:

ದೇಶವು ಪ್ರಗತಿ ಕಾಣಲು ಪ್ರತಿ ಜಿಲ್ಲೆಗಳು ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಕಾಣುವ ಅವಶ್ಯಕತೆಯಿದೆ. ಸ್ಥಳೀಯ ಪರಿಸರಕ್ಕೆ ಧಕ್ಕೆಯಾಗದಂತೆ ಸಹಕಾರ ತತ್ವದಡಿ ಬೆಳವಣಿಗೆ ನಡೆಸುವ ಯೋಜನೆ ಕಾರ್ಯಗತಗೊಳ್ಳಬೇಕು ಎಂದು ರಾಷ್ಟ್ರೀಯ ಸಹಕಾರ ನೀತಿ ಸಮಿತಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಸಚಿವ ಸುರೇಶ ಪಿ. ಪ್ರಭು ಅಭಿಪ್ರಾಯಪಟ್ಟರು.ಶುಕ್ರವಾರ ನಗರದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ ಹಾಗೂ ಡಾ. ವಿ.ಎಸ್. ಸೋಂದೆ ಫೌಂಡೇಶನ್ ಸಹಯೋಗದಲ್ಲಿ ಡಾ. ವಿ.ಎಸ್ ಸೋಂದೆ ಸ್ಮರಣಾರ್ಥ ನಡೆದ ದ್ವಿತೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ ಎಂಬ ವಿಷಯವಾಗಿ ಮಾತನಾಡಿದರು. ಈಗಾಗಲೇ ಪ್ರಯೋಗಾತ್ಮಕವಾಗಿ ದೇಶದ ೬ ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು ಈ ಜಿಲ್ಲೆಗಳು ೨ರಿಂದ ೩ ಪ್ರತಿಶತ ಹೆಚ್ಚಿನ ಆರ್ಥಿಕ ಪ್ರಗತಿ ಕಂಡಿದೆ ಎಂದರು.ದೇಶವು ಆರ್ಥಿಕ ಪ್ರಗತಿ ಹೊಂದುವ ಜತೆಗೆ ಸಾಮಾಜಿಕ ಪ್ರಗತಿಯನ್ನು ಹೊಂದಬೇಕು. ಇದು ಸಾಕಾರಗೊಳ್ಳಲು ಸಹಕಾರ ರಂಗದಿಂದ ಮಾತ್ರ ಸಾಧ್ಯ. ವಿಶ್ವದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿದ್ದು, ಪ್ರಧಾನಿಗಳ ಕನಸಿನಂತೆ ಮುಂದಿನ ೫ ವರ್ಷಗಳಲ್ಲಿ ೫ ಟ್ರಿಲಿಯನ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲು ಸಹಕಾರ ಕ್ಷೇತ್ರದ ಹಾಗೂ ಸಹಕಾರಿಗಳ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.ಸಹಕಾರಿಗಳು ಎಂದಿನ ಸಾಂಪ್ರದಾಯಿಕ ಕಾರ್ಯಗಳ ಜತೆಗೆ ಹೊಸ ಯೋಜನೆ ಮುಖಾಂತರ ಬದಲಾವಣೆ ತಂದು ಲಾಭದಾಯಕ ಸಂಸ್ಥೆಗಳಾಗಿ ಮುಂದುವರಿಯಬೇಕು ಎಂದ ಪ್ರಭು, ನಾಯಕತ್ವ ಗುಣಗಳು ಡಾ. ವಿ.ಎಸ್. ಸೋಂದೆ ಅವರಲ್ಲಿ ಇತ್ತು. ಈ ಕಾರಣದಿಂದ ಶಿರಸಿ ಅರ್ಬನ್ ಬ್ಯಾಂಕ್ ಕೂಡ ರಾಜ್ಯದ ಯಶಸ್ವಿ ಬ್ಯಾಂಕಾಗಿ ಗುರುತಿಸಿಕೊಂಡಿದೆ ಎಂದು ಶ್ಲಾಘಿಸಿದರು.ಬ್ಯಾಂಕ್‌ ವೃತ್ತಿಪರ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳನ್ನು ಹೊಂದಿದ್ದು, ಸೋಂದೆ ಅವರು ತೋರಿದ ಮಾರ್ಗದಶನದಲ್ಲಿ ಬ್ಯಾಂಕ್‌ ಮುಂದುವರಿದು ಯಶಸ್ವಿಯಾಗಲಿ ಎಂದು ಹಾರೈಸಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸೊಂದೆ ಅವರು ಸಹಕಾರ ಕ್ಷೇತ್ರವಲ್ಲದೇ ಶೈಕ್ಷಣಿಕ, ಕೃಷಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಶಿರಸಿ ಅರ್ಬನ್ ಬ್ಯಾಂಕ್‌ ಪ್ರಮಾಣಿಕ ಹಾಗೂ ಪರಿಶ್ರಮದ ಸೇವೆಯ ಮೂಲಕ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಸದೃಢವಾಗಿ ಬೆಳೆದಿದೆ ಎಂದರು.ಬ್ಯಾಂಕ್‌ ಅಧ್ಯಕ್ಷ ಜಯದೇವ ಯು. ನಿಲೇಕಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಎಸ್. ಸೋಂದೆ ಫೌಂಡೇಶನ್‌ ಟ್ರಸ್ಟಿ ರಾಜೇಶ ಜಿ. ಧಾಕಪ್ಪ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್ ಪರಿಚಯಿಸಿದರು. ಬ್ಯಾಂಕ್‌ ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ನಿರೂಪಿಸಿದರು. ರಾಜ್ಯದ ವಿವಿಧೆಡೆಯಿಂದ ೩೦೦ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ಸುರೇಶ ಪ್ರಭು ಅವರಿಂದ ಸೂಕ್ತ ಉತ್ತರ ಪಡೆದುಕೊಂಡರು.

ಕರಡು ನೀತಿ ಸಲ್ಲಿಕೆಸಹಕಾರ ಕ್ಷೇತ್ರದ ಬದಲಾವಣೆಗಾಗಿ ಕರಡು ನೀತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಇದು ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಮುಖಾಂತರ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬಹುದು ಎಂದು ಸುರೇಶ ಪ್ರಭು ವಿಶ್ವಾಸ ವ್ಯಕ್ತಪಡಿಸಿದರು.

Share this article