ಹೊಸದುರ್ಗ: ಸರ್ಕಾರ ಎಡಗೈ ಸಮುದಾಯಕ್ಕೆ ಶೇ.6 ಹಾಗೂ ಬಲಗೈ ಸಮುದಾಯಕ್ಕೆ ಶೇ.6 ಒಳ ಮೀಸಲಾತಿ ನೀಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಕಲ್ಪನೆ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಇಲ್ಲ. ಮೀಸಲಾತಿಯನ್ನು ಎಲ್ಲಾ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕಿತ್ತು. ಶೇ.6ರಷ್ಟು ಮೀಸಲಾತಿಯಿಂದ ಜಾತಿಗಳ ಮಧ್ಯೆ ಕಿತ್ತಾಟ ತಂದಿಟ್ಟಂತಾಗಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಖರ್ ಹೇಳಿದ್ದಾರೆ.
ಉಳ್ಳವರು ಮೀಸಲಾತಿ ತ್ಯಾಗ ಮಾಡಲಿ :
ಮೀಸಲಾತಿಯಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದು ಉತ್ತಮ ಸ್ಥಾನಕ್ಕೆ ಬಂದ ದಲಿತ ಸಮುದಾಯದ ಮುಖಂಡರು ಆ ಮೀಸಲಾತಿಯನ್ನು ತ್ಯಾಗ ಮಾಡಿ ಅದೇ ಸಮುದಾಯದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಆ ಸಮುದಾಯಗಳು ಅಭಿವೃದ್ಧಿ ಹೊಂದುತ್ತವೆ. ನಾನು ಶಾಲಾ ಕಾಲೇಜು ದಿನಗಳಿಂದ ಮೀಸಲಾತಿಯ ಪ್ರಯೋಜನ ಪಡೆದುಕೊಂಡಿದ್ದೇನೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಮೀಸಲಾತಿ ಅನ್ವಯ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದೆ. ನಾನು ಇನ್ನು ಮುಂದೆ ನನ್ನ ಮೀಸಲಾತಿಯನ್ನು ತ್ಯಾಗ ಮಾಡಲಿದ್ದೇನೆ. ಸಾಮಾನ್ಯ ವರ್ಗದಲ್ಲಿ ಸ್ಪರ್ಧೆ ಮಾಡುತ್ತೇನೆ. ಇನ್ನುಳಿದ ನಾಯಕರೂ ಅದೇ ರೀತಿ ಮಾಡಿದಲ್ಲಿ ಆಯಾ ಸಮುದಾಯಗಳಲ್ಲಿ ಇತರೆಯವರಿಗೂ ಅವಕಾಶಗಳು ಸಿಗಲಿವೆ ಎಂದು ಹೇಳಿದರು.ಅದೇ ರೀತಿ ಅರವಿಂದ ಲಿಂಬಾವಳಿ, ಶಿವರಾಜ ತಂಗಡಗಿ, ಮುನಿಯಪ್ಪ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಎಲ್ಲಾ ದಲಿತ ಸಮುದಾಯ ಮುಖಂಡರು ಅಧಿಕಾರಿಗಳು ಮೀಸಲಾತಿಯನ್ನು ತಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೊಡಿಸದೆ ಮೀಸಲಾತಿಯಿಂದ ಹೊರಬಂದು ನಮ್ಮದೇ ಸಮುದಾಯದ ಇತರರಿಗೆ ತ್ಯಾಗ ಮಾಡಲಿ ಎಂದರು.