ಕೇಂದ್ರದಿಂದ ಕೆಲಸ ಆಗಿಲ್ಲ ಎನ್ನುವವರು ಚರ್ಚೆಗೆ ಬರಲಿ: ಅನಂತಕುಮಾರ ಹೆಗಡೆ

KannadaprabhaNewsNetwork |  
Published : Jan 13, 2024, 01:36 AM IST
12ಬಿಕೆಲ್2: ಭಟ್ಕಳದಲ್ಲಿ ಸಂಸದ ಅನಂತಕುಮಾರ ಹೆಗಡೆ ಪಕ್ಷದ ಮುಖಂಡರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.  | Kannada Prabha

ಸಾರಾಂಶ

ಕೆಲವು ಸೋಗಲಾಡಿಗಳು ಜಿಲ್ಲೆಯಲ್ಲಿ ಕೇಂದ್ರದಿಂದ ಕೆಲಸವಾಗಿಲ್ಲ, ಅಭಿವೃದ್ಧಿ ಆಗಿಲ್ಲ ಎಂದು ಬೊಗಳೆ ಬಿಡುತ್ತಿದ್ದಾರೆ. ನಾನು ಬೆಡ್ ಮೇಲೆ ಮಲಗಿದ್ದ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಕ್ಕೆ ತೊಂದರೆ ಆಗಿಲ್ಲ.

ಭಟ್ಕಳ:

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಎಲ್ಲ ಕೆಲಸಗಳೂ ಆಗಿವೆ. ಒಂದು ವೇಳೆ ಆಗಿಲ್ಲ ಎನ್ನುವವರು ಧಮ್ ಇದ್ದರೆ ಚರ್ಚೆಗೆ ಬರಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಸೋಗಲಾಡಿಗಳು ಜಿಲ್ಲೆಯಲ್ಲಿ ಕೇಂದ್ರದಿಂದ ಕೆಲಸವಾಗಿಲ್ಲ, ಅಭಿವೃದ್ಧಿ ಆಗಿಲ್ಲ ಎಂದು ಬೊಗಳೆ ಬಿಡುತ್ತಿದ್ದಾರೆ. ನಾನು ಬೆಡ್ ಮೇಲೆ ಮಲಗಿದ್ದ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಕ್ಕೆ ತೊಂದರೆ ಆಗಿಲ್ಲ ಎಂದರು.ಜಿಲ್ಲೆಯಲ್ಲಿ ಕೇಂದ್ರದ ಹೆಚ್ಚು ಅನುದಾನ ಬಳಕೆ ಮಾಡಲಾಗಿದ್ದರೂ ಅನಂತಕುಮಾರ ಹೆಗಡೆ ಕೆಲಸ ಮಾಡಿಲ್ಲ ಎಂದು ಆರೋಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ರಾಜ್ಯ ಸರ್ಕಾರದ ಕೆಲಸವೇ ಹೊರತು, ಕೇಂದ್ರದಲ್ಲ. ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದರೂ ಕೇಂದ್ರ ಸ್ಥಾನದಲ್ಲಿ ಸಮರ್ಪಕವಾಗಿ ಜಾಗ ಸಿಕ್ಕಿಲ್ಲ. ಈಗಿನ ಸರ್ಕಾರ ಜಾಗ ಹುಡುಕಿ ಆಸ್ಪತ್ರೆ ಮಾಡಬಹುದು ಎಂದು ಕಾಂಗ್ರೆಸ್‌ ಶಾಸಕರಿಗೆ ಸಲಹೆ ನೀಡಿದರು.ಹೊನ್ನಾವರ ಬಂದರು ಕಾಮಗಾರಿಗೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಬಂದರು ನಿರ್ಮಾಣವಾದರೆ ಹೊನ್ನಾವರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು ಎಂದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿಗೆ ಅನುದಾನ ತಂದರೂ ಕೆಲವರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಂಕಿಯಲ್ಲಿ ಬಂದರು ನಿರ್ಮಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಚತುಷ್ಪಥ ಕಾಮಗಾರಿ ಕುಂಟುತ್ತಾ ಸಾಗಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಕಾರಣ ಎಂದರು.ಭಟ್ಕಳದಲ್ಲಿ ಈ ಹಿಂದೆ ಬೈಪಾಸ್ ಹೆದ್ದಾರಿ ಮಂಜೂರಿಯಾದರೂ ಸಹ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಹೆದ್ದಾರಿ ನಗರದೊಳಗೆ ಹೋಗುವುದಕ್ಕಿಂತ ನಗರದ ಹೊರಗೆ ಹೋದರೆ ಉತ್ತಮ ಎಂದ ಅವರು, ಭಟ್ಕಳದಲ್ಲಿ ಚತುಷ್ಪಥ ಹೆದ್ದಾರಿ ಬೈಪಾಸ್, ಪ್ಲೈಓವರ್ ಇಲ್ಲದೇ ಆಗುತ್ತಿದೆ. ಕೆಲವೆಡೆ ಆಗಬೇಕಾದ ಅಂಡರಪಾಸ್ ಸೇರಿದಂತೆ ಅಗತ್ಯ ಹೆದ್ದಾರಿ ಕಾಮಗಾರಿಯ ಬಗ್ಗೆ ಎನ್‌ಎಚ್‌ಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಸಂಸದ, ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆ ನಿರ್ಮಾಣಕ್ಕೆ ಯಾವ ಉದ್ಯಮಿ ಬರುತ್ತಿಲ್ಲ. ಇಲ್ಲಿ ಹಾಕಿದ ಹಣ ವಾಪಾಸ್ ಸಿಗುತ್ತದೆ ಎನ್ನುವ ವಿಶ್ವಾಸ ಅವರಿಗಿಲ್ಲ. ಹೀಗಾಗಿಯೇ ಬೃಹತ್ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ಭಟ್ಕಳದಲ್ಲಿ ಸುರಕ್ಷತೆಯ ಬಗ್ಗೆ ಇನ್ನೂ ವಿಶ್ವಾಸ ಮೂಡದ ಹಿನ್ನೆಲೆಯಲ್ಲಿ ಇಲ್ಲಿಯೂ ಕೂಡ ಉದ್ಯಮ ಮಾಡಲು ಹಿಂಜರಿಯುತ್ತಿದ್ದಾರೆ ಎಂದರು.ಸಭೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ಪ್ರಮುಖರಾದ ಗೋವಿಂದ ನಾಯ್ಕ, ಕೃಷ್ಣ ಎಸಳೆ, ದೀಪಕ ನಾಯ್ಕ ಮಂಕಿ, ವಿನೋದ ನಾಯ್ಕ ರಾಯಲಕೇರಿ, ಚಂದ್ರು ಎಸಳೆ, ಎ.ಎನ್. ಪೈ, ಶಿವಾನಿ ಶಾಂತರಾಮ, ಸುಬದ್ರಾ ದೇವಡಿಗ, ರವಿ ನಾಯ್ಕ, ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರಿದ್ದರು.

ಸೀಟು ಬಿಟ್ಟುಕೊಡಿಸಭೆಯಲ್ಲಿ ಸಂಸದ ಅನಂಕುಮಾರ ಹೆಗಡೆ ಅವರಿಗೆ ಪಕ್ಷದ ಯುವ ಕಾರ್ಯಕರ್ತನೊಬ್ಬ ನೀವು 30 ವರ್ಷಗಳಿಂದ ಜಿಲ್ಲೆಯ ಸಂಸದರಾಗಿದ್ದೀರಿ. ಸರ್, ಈ ಸಲ ನೀವು ಸ್ಪರ್ಧೆ ಮಾಡದೇ ಪಕ್ಷದ ಬೇರೆಯೊಬ್ಬರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಒಳ್ಳೆಯದು ಎಂದು ಧೈರ್ಯದಿಂದ ಸಂಸದರಲ್ಲಿ ಹೇಳಿದಾಗ, ಸಂಸದರು ಆಯಿತು, ನೀನೇ ಬಾ, ಮಾರಾಯಾ, ನಾನು ಬಿಟ್ಟು ಕೊಡುತ್ತೇನೆಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ