ಆದಿವಾಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಿ

KannadaprabhaNewsNetwork | Published : Jul 23, 2024 12:33 AM

ಸಾರಾಂಶ

ಆದಿವಾಸಿ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆದಿವಾಸಿ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮತ್ವ ಟ್ರಸ್ಟ್, ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ದತ್ತಿ (ಎಟ್ರಿ) ವತಿಯಿಂದ ಆಯೋಜಿಸಿದ್ದ ಆದಿವಾಸಿ ಕಾಲೇಜು ಯುವಜನ ಪ್ರೇರಣಾ ಕಾರ್ಯಾಗಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದಾರೆ. ಆದಿವಾಸಿ ಮಕ್ಕಳು ಅರ್ಧಕ್ಕೆ ಶಾಲೆ ಬಿಡುವ ಪ್ರಕರಣಗಳು ಕಂಡುಬರುತ್ತಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಶಾಲೆ ಬಿಡದೆ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಉದ್ಯೋಗ ಸಿಗಲು ಉತ್ತಮ ಅಂಕ ಮುಖ್ಯ. ಆ ನಿಟ್ಟಿನಲ್ಲಿ ಉತ್ತಮ ಅಂಕ ಪಡೆಯಲು ಗುರಿ ಇಟ್ಟುಕೊಳ್ಳಬೇಕು. ಅಲ್ಲದೇ ಅನುತ್ತೀರ್ಣರಾದಾಗ ದೃತಿಗೆಡಬಾರದು. ನಿರಂತರ ಪ್ರಯತ್ನ ಮಾಡುವ ಮೂಲಕ ಉತ್ತೀರ್ಣರಾಗಬೇಕು ಎಂದು ಹೇಳಿದರು.

ಆದಿವಾಸಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ, ಅಂತರ್ಜಾತಿ ವಿವಾಹ ಆಗುವವರಿಗೆ ಪ್ರೋತ್ಸಾಹಧನ ಸೇರಿದಂತೆ ಇತರೆ ಹಲವು ಸವಲತ್ತುಗಳು ಸಿಗಲಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸಲು ಕ್ರಮವಹಿಸಲಾಗುವುದು ಎಂದರು.

ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಗಮನಹರಿಸಬೇಕು. ಅಲ್ಲದೇ ತಮ್ಮ ಮೂಲ ಆಹಾರ ಪದ್ಧತಿಗಳನ್ನು ಬಿಡಬಾರದು. ವೈಯಕ್ತಿಕ ಆರೋಗ್ಯದ ಕಡೆ ಗಮನ ನೀಡಬೇಕು. ಕುಡಿತದಿಂದ ಜೀವನ ಹಾಳಾಗುತ್ತದೆ. ಆದ್ದರಿಂದ ಆದಿವಾಸಿಗಳು ಕುಡಿತ ಬಿಟ್ಟು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬುಡಕಟ್ಟು ಆದಿವಾಸಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಗಿರಿಜನರಿಗೆ ಶಿಕ್ಷಣ ಬಹಳ ಮುಖ್ಯ. ಸರ್ಕಾರವು ಆದಿವಾಸಿ ಮಕ್ಕಳ ಅನುಕೂಲಕ್ಕಾಗಿ ಹಲವು ಶಾಲೆಗಳನ್ನು ತೆರೆದಿದೆ. ಆದರೆ ಎಸ್ಸೆಸ್ಸೆಲ್ಸಿ ತನಕ ಶಿಕ್ಷಣ ಪಡೆಯುವ ಆದಿವಾಸಿ ಪಟ್ಟಣ ಪ್ರದೇಶಗಳಿಗೆ ಹೊಂದಿಕೊಳ್ಳಲು ಕಷ್ಟವಾಗುವುದರಿಂದ ಕಾಲೇಜುಗಳನ್ನು ಬಿಡುತ್ತಾರೆ ಎಂದು ತಿಳಿಸಿದರು.

ಕಳೆದ ಹಲವು ವರ್ಷಗಳಿಂದಲೂ ಆದಿವಾಸಿಗಳಿಗೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಲಾಗುತ್ತಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳಲ್ಲಿ ಜಾಗೃತಿ ಮೂಡುತ್ತಿದ್ದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತೆ ಮಾಡಲು ಓದುವ ಪ್ರವೃತ್ತಿ ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಪುಸ್ತಕ ಬಿಡುಗಡೆ:

ಇದೇ ವೇಳೆ ಹರೀಶ್‌.ಆರ್‌.ಪಿ ಮತ್ತು ಮಲೈಮ ನಿಂಗೋಜಿ ಅವರು ಬರೆದಿರುವ ಕಾಡುವ ಜ್ಞಾನದ ಜಾಡು ಪುಸ್ತಕವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಬಿಡುಗಡೆ ಮಾಡಿದರು. ಗಿರಿಜನ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ನವೀನ್ ಭಟ್, ಸಮತ್ತ ಟ್ರಸ್ಟ್ ಅಧ್ಯಕ್ಷ ಡಾ.ಶ್ರೀನಿವಾಸ್, ಏಟ್ರಿ ಸಂಸ್ಧೆಯ ಡಾ.ಸಿದ್ದಪ್ಪಶೆಟ್ಟಿ, ಮುಖಂಡರಾದ ಜಡೇಸ್ವಾಮಿ, ಪುಟ್ಟಮ್ಮ, ರಂಗೇಗೌಡ, ಬಸವರಾಜು, ಮಾದು, ನಂಜೇಗೌಡ ಮುಂತಾದವರು ಇದ್ದರು.

Share this article