ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಲಿ : ಸಾಹಿತಿ ಕುಂ.ವೀರಭದ್ರಪ್ಪ

KannadaprabhaNewsNetwork |  
Published : Jun 30, 2024, 12:48 AM IST

ಸಾರಾಂಶ

ಬಸವಣ್ಣನವರು ಜನಿಸಿದ ವಿಜಯಪುರ ಮತ್ತು ಐಕ್ಯ ಸ್ಥಳವಾದ ಬಾಗಲಕೋಟೆ ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಸವಣ್ಣನವರು ಜನಿಸಿದ ವಿಜಯಪುರ ಮತ್ತು ಐಕ್ಯ ಸ್ಥಳವಾದ ಬಾಗಲಕೋಟೆ ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಹಿರಿಯ ಪತ್ರಕರ್ತ ರಾಮ ಮನಗೂಳಿ ಪ್ರಧಾನ ವೇದಿಕೆಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ 1272 ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರಿಗೂ ವಚನ ರಚಿಸುವ ಅವಕಾಶ ನೀಡಿ, ಅಚ್ಚ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಬಸಣ್ಣನವರಿಗೆ ಸಲ್ಲುತ್ತದೆ ಎಂದರು.

ಇಂತಹ ಅದ್ಭುತವಾದ ವಚನಗಳನ್ನು ನಾವು ಇಂದು ಹೇಳಬೇಕಾದಲ್ಲಿ ಪ.ಘು.ಹಳಕಟ್ಟಿ ಅವರ ಸ್ಮರಣೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕನ್ನಡಿಗರ ಕರ್ತವ್ಯವಾಗಿದೆ. ಅಳಿದು ಹೋದ ವಚನಗಳನ್ನು ಹುಡುಕಿ ಪರಿಶೀಲಿಸಿ ಮರು ಮುದ್ರಣ ಮಾಡಿ ನಮಗೆ ದೊರಕುವಂತೆ ಮಾಡಿದ್ದಾರೆ. ಕನ್ನಡ ನಾಡು ಶಾಂತಿಯ ಬೀಡಾಗಿದ್ದು, ಇಂತಹ ನಾಡು ಭೂಪ್ರದೇಶದಲ್ಲಿ ಯಾವುದಾದರೂ ಇದ್ದರೆ ಅದು ಕರ್ನಾಟಕ ಮಾತ್ರವೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮಾತನಾಡಿ, ಕನ್ನಡ ಎಲ್ಲರ ಪರಿಷತ್ ಆಗಿದ್ದು, ಕನ್ನಡದ ಸ್ಥಿತಿಗತಿಯ ಪರಿಶೀಲನೆ ಜೊತೆಗೆ ಪರಿಹಾರ ಹುಡುಕುವ ಕೆಲವಾಗಬೇಕಿದೆ. ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೂ ಇಂಗ್ಲಿಷ್‌ ಬರೋಲ್ಲ ಅಂದರೆ ಕೆಲಸ ದೊರೆಯುತ್ತಿಲ್ಲ. ಕನ್ನಡ ಶಾಲೆಗಳು ಸ್ವಿಡನ್‌ ನಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಕನ್ನಡದ ನೆಲದಲ್ಲಿದ್ದರೂ ಕೂಗುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮತ್ತು ಶಾಸಕ ಎಚ್.ವೈ. ಮೇಟಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪರಿಷತ್‌ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆ ಇದೆ. ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕನ್ನಡ ಪರಿಷತ್ ವಿಶೇಷವಾಗಿವೆ. ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಇದೇ ವೇಳೆ ರಜತಕೋಟೆ ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಬಿಡುಗಡೆಗೊಳಿಸಿದರೆ, ವಿವಿಧ ಲೇಖಕರ ಕೃತಿ ಹಾಗೂ ಪರಿಷತ್ತಿನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ತಾತಾಸಾಹೇಬ ಬಾಂಗಿ, ಮಾಜಿ ಸಚಿವ ಎಸ್.ಜಿ. ನಂಜಯ್ಯನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಆಯಾ ತಾಲೂಕು ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ