ಧರ್ಮದಿಂದ ನಡೆದು ಮಾನವರೆಲ್ಲರೂ ಒಂದು ಎನ್ನೋಣ: ವಿಜಯಮಹಾಂತ ಸ್ವಾಮೀಜಿ

KannadaprabhaNewsNetwork |  
Published : Jan 31, 2024, 02:18 AM IST
ಗಜೇಂದ್ರಗಡ ಸೌಹಾರ್ದತೆ ಪರಂಪರೆ ಉಳಿಸುವ ಬೆಳೆಸುವ ಅಭಿಯಾನ ಹಿನ್ನಲೆ ಸ್ಥಳೀಯ ಕೆಕೆ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.  | Kannada Prabha

ಸಾರಾಂಶ

ಜಾತಿ ವಿಷ ಇದ್ದಂತೆ, ಧರ್ಮ ಅಮೃತವಿದ್ದಂತೆ. ಹೀಗಾಗಿ ಜಾತಿ ಹಿಡಿದು ಬಡಿದಾಡುವ ಬದಲು ಧರ್ಮದಿಂದ ನಡೆದು ಜಾತ್ಯತೀತರಾಗಿ ಮಾನವರೆಲ್ಲರೂ ಒಂದು ಎನ್ನೋಣ ಎಂದು ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಗಜೇಂದ್ರಗಡ: ಜಾತಿ ವಿಷ ಇದ್ದಂತೆ, ಧರ್ಮ ಅಮೃತವಿದ್ದಂತೆ. ಹೀಗಾಗಿ ಜಾತಿ ಹಿಡಿದು ಬಡಿದಾಡುವ ಬದಲು ಧರ್ಮದಿಂದ ನಡೆದು ಜಾತ್ಯತೀತರಾಗಿ ಮಾನವರೆಲ್ಲರೂ ಒಂದು ಎನ್ನೋಣ ಎಂದು ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.ಮಹಾತ್ಮಗಾಂಧಿ ಹುತಾತ್ಮ ದಿನ ಅಂಗವಾಗಿ ರಾಜ್ಯವಾಪಿ ಸೌಹಾರ್ದತೆ ಪರಂಪರೆ ಉಳಿಸಿ ಬೆಳೆಸುವ ಅಭಿಯಾನ ಹಿನ್ನೆಲೆ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಸೌಹಾರ್ದ ಕರ್ನಾಟಕ, ವಿವಿಧ ಪ್ರಗತಿಪರ, ಸಮಾನ ಮನಸ್ಕರು ಹಾಗೂ ಜನಪರ ಸಂಘಟನೆಗಳಿಂದ ಮಂಗಳವಾರ ನಡೆದ ಸೌಹಾರ್ದತಾ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವ ಧರ್ಮಗಳು ಸಹ ಕೆಟ್ಟದನ್ನು ಹೇಳಿಲ್ಲ. ಪ್ರತಿಯೊಂದು ಧರ್ಮಗಳು ಉತ್ತಮ ಸಂದೇಶಗಳನ್ನು ನೀಡಿವೆ. ದೇಶದಲ್ಲಿ ಜಾತಿಯಿಂದ ದೂರವಾಗಿ ಜಾತ್ಯತೀತವಾಗಿ ಬಾಳಬೇಕು. ನಮ್ಮ ದೇಶದಲ್ಲಿರುವ ಜನರೆಲ್ಲರೂ ಭಾರತೀಯರು. ದೇಶವಾಸಿಗಳೆಲ್ಲ ನಾವು ಒಂದೇ ಎಂದು ಬದುಕು ಕಟ್ಟಿಕೊಳ್ಳೋಣ ಎಂದ ಅವರು, ಭಗತ್ ಸಿಂಗ್ ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಮಹಾತ್ಮ ಗಾಂಧೀಜಿ ಅವರು ಸಬಕೋ ಸನ್ಮತಿ ದೇ ಭಗವಾನ್ ಎಂದು ರಾಮನ ಭಜನೆ ಜತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಯಾವೊದೋ ಒಬ್ಬ ಪಾಪಿ ಗುಂಡು ಹಾಕಿದ. ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧೀಜಿ ಅವರನ್ನು ಸ್ಮರಣೆ ಜತೆಗೆ ಮಹಾನ್ ನಾಯಕರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಟಕ್ಕೇದ ದರ್ಗಾದ ಹಜರತ್ ಸೈಯದ್ ನಿಜಾಮುದ್ದೀನ್ ಶಾ ಅಶ್ರಫಿ ಮಾತನಾಡಿ, ಜಾತಿ ಮನೆಗೆ ಸೀಮಿತವಾಗಿರಬೇಕು ಹೊರಗೆ ಬಂದರೆ ನಾವೆಲ್ಲ ಒಂದೇ ಎನ್ನುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕಿದೆ. ಮನುಷ್ಯನಿಗೆ ಬೆಲೆ ಇಲ್ಲ, ಮನುಷ್ಯತ್ವಕ್ಕೆ ಬೆಲೆ ಇದೆ. ಸರ್ವಜನಾಂಗದ ತೋಟದಲ್ಲಿ ಎಲ್ಲರೂ ಒಗಟ್ಟಿನಿಂದ ಬಾಳಿದರೆ ಹೂತೋಟ ಸುಂದರವಾಗಿ ಕಾಣಲಿದೆ ಎಂದರು.

ಇಲ್ಲಿನ ರಾಜವಾಡೆಯ ಯಶರಾಜ್ ಘೋರ್ಪಡೆ ಮಾತನಾಡಿ, ಪಟ್ಟಣದಲ್ಲಿ ೧೮ ಮಠ, ೧೮ ಮಸೀದಿ ಹಾಗೂ ೧೮ ಬಾವಿಗಳನ್ನು ಕಟ್ಟಿದ್ದೇವೆ. ನಮ್ಮ ಊರಿನಂತೆ ದೇಶದಲ್ಲಿ ಮತ್ತೊಂದು ಊರಿಲ್ಲ ಎನ್ನುವುದು ಹೆಮ್ಮೆ ನಮಗಿದೆ. ಇಂತಹ ಭವ್ಯವಾದ ಇತಿಹಾಸ ಹಾಗೂ ಸಂಪ್ರದಾಯದ ಛತ್ರಪತಿ ಶಾಹುಮಹಾರಾಜ ಪ್ರಥಮ ಮೀಸಲಾತಿ ಜಾರಿ ತಂದವರು. ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗ ಮತ್ತು ಅವರ ಆದರ್ಶಗಳು ನಮಗೆ ಪ್ರೇರಣೆಯಾಗಿದ್ದು, ಸೌಹಾರ್ದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.

ಫಾದರ್ ಜೊಶೇಪ್ ಮಾತನಾಡಿ, ನಾವು ಎಲ್ಲರೂ ಒಂದು ಎನ್ನುವ ಮನೋಭಾವನೆ ನಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಹೀಗಾಗಿ ನಾವು ಒಂದು ಎಂದು ಸಾಗುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ನಿವೃತ್ತ ಉಪನ್ಯಾಸಕ ಬಿ.ಎ.ಕೆಂಚರೆಡ್ಡಿ, ವಕೀಲ ಎಂ.ಎಸ್.ಹಡಪದ, ಮುಖಂಡ ಎ.ಡಿ.ಕೋಲಕಾರ ಮಾತನಾಡಿದರು.

ಈ ವೇಳೆ ಮಾರುತಿ ಚಿಟಗಿ, ರಾಜು ಸಾಂಗ್ಲೀಕರ, ಬಾಲು ರಾಠೋಡ, ಶರಣು ಪೂಜಾರ, ಬಸವರಾಜ ಹೊಸಮನಿ, ಚಂದ್ರು ರಾಠೋಡ, ಗಣೇಶ ರಾಠೋಡ, ಹಸನಸಾಬ ತಟಗಾರ, ಕಳಕಯ್ಯ ಸಾಲಿಮಠ, ನಾಸಿರಅಲಿ ಸುರಪುರ, ಉಮೇಶ ರಾಠೋಡ ಸೇರಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ