ಸಿದ್ದಾಪುರ: ಅಭಿವೃದ್ಧಿ ಎಂದರೆ ಪ್ರಕೃತಿಯನ್ನು ನಾಶ ಮಾಡುವುದು ಎಂದಾದರೆ ಅಂತಹ ಅಭಿವೃದ್ಧಿ ನಮಗೆ ಬೇಡವೇ ಬೇಡ. ಜಿಲ್ಲೆಯ ಬೇಡ್ತಿ- ಅಘನಾಶಿನಿ ನದಿಯನ್ನು ಉಳಿಸಿಕೊಳ್ಳಲೇಬೇಕಾಗಿದೆ. ಆದ್ದರಿಂದ ಯುವಜನತೆಗೆ ಇದು ಗೊತ್ತಾಗಬೇಕಿದೆ. ನಾವೆಲ್ಲ ನಮ್ಮ ಪಶ್ಚಿಮ ಘಟ್ಟ ಮತ್ತು ನದಿಗಳನ್ನು ಉಳಿಸಿಕೊಳ್ಳೋಣ. ನಮ್ಮ ಪರಿಸರದ ಬದುಕು ಮತ್ತು ಜಲರಾಶಿಯನ್ನು ಕಾಪಾಡಿಕೊಳ್ಳೋಣ ಎಂದು ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಪಶ್ಚಿಮ ಘಟ್ಟದ ಸಂಪತ್ತಿನ ಮೇಲೆ ಸರ್ಕಾರದ ಕಣ್ಣು ನೆಟ್ಟಿದೆ. ಹಲವಾರು ಯೋಜನೆಗಳನ್ನು ತರಲು ಹೊರಟಿದೆ. ಒಂದು ವೇಳೆ ಯೋಜನೆಗಳು ಬಂದರೆ ನಾವು ನಿರ್ಗತಿಕರಾಗಬೇಕಾಗುತ್ತದೆ. ಅಲ್ಲದೆ ಸಂಪೂರ್ಣವಾಗಿ ಪರಿಸರವೇ ಹಾಳಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಪ್ರಸಾರಕ ಸಮಿತಿಯ ಪ್ರೆಸಿಡೆಂಟ್ ಶಶಿಭೂಷಣ ಹೆಗಡೆ ಮಾತನಾಡಿ, ಅಘನಾಶಿನಿ ನಮ್ಮ ಜಿಲ್ಲೆಯ ಜೀವನಾಡಿ. ಇಡೀ ಜಿಲ್ಲೆಯ ಬದುಕನ್ನು ಕಟ್ಟಿಕೊಡುವ ಅಘನಾಶಿನಿ ನದಿ ತಿರುವ ಯೋಜನೆ ವಿರೋಧಿಸಲೇಬೇಕು. ವಿದ್ಯಾರ್ಥಿಗಳು ಈ ಜಾಗೃತಿಯನ್ನು ತಾಳಬೇಕು. ಬೇಡ್ತಿ- ಅಘನಾಶಿನಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು.ವಿದ್ಯಾರ್ಥಿಗಳಿಗಾಗಿ ಅಘನಾಶಿನಿ ವಿಡಿಯೋ ಪ್ರದರ್ಶನ ಮತ್ತು ಸಂವಾದವನ್ನು ಅಶ್ವಿನಿಕುಮಾರ ಭಟ್, ಗಾಳಿಮನೆ ನಡೆಸಿಕೊಟ್ಟರು. ಡಾ. ಬಾಲಚಂದ್ರ ಹೆಗಡೆ, ಸಾಯಿಮನೆ ಅವರು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ನದಿ ಕಣಿವೆಗಳ ಸಂರಕ್ಷಣೆ ಮತ್ತು ನದಿ ಕಣಿವೆಗಳ ನದಿಯ ನೈಸರ್ಗಿಕ ಹರಿವು ಮತ್ತು ಪರಿಸರ ವ್ಯವಸ್ಥೆಯ ಮಹತ್ವ ಎನ್ನುವ ವಿಷಯ ಮೇಲೆ ಉಪನ್ಯಾಸ ನೀಡಿದರು. ಡಾ. ಪ್ರಕಾಶ ಮೇಸ್ತ, ಹೊನ್ನಾವರ ಅವರು ಅಘನಾಶಿನಿ ಅಳಿವೆಯ ವೈವಿಧ್ಯತೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.