ಗದಗ: ಅಲ್ಪತೆ ಅಳಿಸಿ ವಿಶ್ವತೆ ತರುವುದೇ ಶಿಕ್ಷಣದ ಉದ್ದೇಶವಾಗಬೇಕು. ಪ್ರತಿಯೊಬ್ಬರನ್ನು ವಿಶ್ವಮಾನವರನ್ನಾಗಿ ರೂಪಿಸುವಲ್ಲಿ ವಿದ್ಯೆ,ಸಂಸ್ಕೃತಿ ಮತ್ತು ನಾಗರಿಕತೆಗಳ ಪಾತ್ರ ಮಹತ್ವದ್ದು. ಜಾತಿ,ಮತ, ಪಂಥ ಮೀರಿ ನಾವೇಲ್ಲರೂ ವಿಶ್ವಮಾನವರಾಗೋಣ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎನ್ನುವುದೇ ವಿಶ್ವಮಾನವ ಕಲ್ಪನೆ. ವಿಶ್ವವೇ ನಮ್ಮ ಮನೆ ಎಂಬ ವಿಶಾಲ ಭಾವನೆ ಬೆಳೆದಾಗ ಮಾತ್ರ ವಿಶ್ವಮಾನವ ದಿನಾಚರಣೆ ಸಾರ್ಥಕ. ಮನುಷ್ಯ ಜಾತಿ ತಾನೊಂದೇ ವಲಂ ಎಂದು ಅಸಮಾನತೆಯನ್ನು ತೊಡೆದು ಹಾಕಬೇಕು. ದ್ವೇಷ ಅಸೂಯೆ ಬಿಟ್ಟು ವಿಶ್ವಕುಟುಂಬಿಗಳಾಗಬೇಕು. ಪ್ರತಿಯೊಬ್ಬರು ಪ್ರೀತಿ, ಸಾಮರಸ್ಯ, ಸಮಾನತೆಯಿಂದ ಬದುಕುವುದೇ ನಿಜವಾದ ಧರ್ಮ. ಕುವೆಂಪು ಆ ಮತ ಈ ಮತವಲ್ಲ, ಮನುಜ ಮತ. ಆ ಪಥ ಈ ಪಥವಲ್ಲ, ವಿಶ್ವಪಥ ಎಂದು ಸಾರಿದ್ದಾರೆ ಎಂದು ಹೇಳಿದರು.
ಎ.ಎಸ್.ಎಸ್.ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಬಾಹುಬಲಿ ಜೈನರ ಮಾತನಾಡಿ, ಕುವೆಂಪು ಶ್ರೇಷ್ಠ ಕವಿ, ಆಧ್ಯಾತ್ಮಿಕ, ನಿಸರ್ಗ, ವೈಚಾರಿಕ ಕವಿ ಹತ್ತು ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ವಿಶಿಷ್ಟವಾದ ವಿಶ್ವಮಾನವ ಸಂದೇಶ ಕೊಟ್ಟಿದ್ದಾರೆ ಎಂದರು.ಸೋಮಶೇಖರ ಮುನವಳ್ಳಿ ಯು.ಎಸ್.ಎ ಕೊಡಮಾಡುವ ಡಾ. ಎಸ್.ಎಸ್.ಉಪ್ಪಿನ ಧಾರವಾಡ ಸ್ಮರಣಾರ್ಥ ಸಂಯುಕ್ತ ಕರ್ನಾಟಕ ಬೆಳಗಾವಿ ಜಿಲ್ಲಾ ವರದಿಗಾರ ಕೀರ್ತನಾ ಕುಮಾರಿ.ಕೆ ಅವರಿಗೆ ಮಾಧ್ಯಮ ಪ್ರಶಸ್ತಿ ಹಾಗೂ ಮಾತೋಶ್ರೀ ವೀರಮ್ಮ ನಾಗಪ್ಪ ಮುನವಳ್ಳಿ ಸ್ಮರಣಾರ್ಥ ಸಮಾಜ ಸೇವಿಕಾ ಪ್ರಶಸ್ತಿಯನ್ನು ಶಿಕ್ಷಕಿ ಶಹನಾಜ ಬೇಗಂ ಸಲೀಂ ಅಣ್ಣಿಗೇರಿ ಅವರಿಗೆ ಪ್ರಧಾನ ಮಾಡಲಾಯಿತು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಪೂಜಿ ಬೆಂಗಳೂರು ಮಾತನಾಡಿದರು. ಪ್ರದೀಪ ಅರ್ಕಸಾಲಿ ವಾಯೋಲಿನ್ ನುಡಿಸಿದರು. ಪ್ರಸಾದ ಸುತಾರ ಸಂಗೀತ ಸೇವೆ ನೀಡಿದರು. ಧರ್ಮಗ್ರಂಥ ಪಠಣವನ್ನು ಧನುಷ್ಯ ಎಂ. ಮಳಗಲಿ ಹಾಗೂ ವಚನ ಚಿಂತನ ಕೃತಿಕಾ.ಎಸ್.ಅರಸಿದ್ದಿ ನಡೆಸಿಕೊಟ್ಟರು.ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಮಂಜುನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಇದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಶಿವಾನಂದ ಹೊಂಬಳ ನಿರೂಪಿಸಿದರು.