ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಕೋರವಾರ ಮಹಾಂತೇಶ್ವರ ಶಿಲಾ ಮಂಟಪದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಂದಿರ ದೇವಸ್ಥಾನಗಳಿಗೆ ಪವಿತ್ರ ಇತಿಹಾಸವುಂಟು. ಮಂದಿರವೆಂದರೆ ಕೇವಲ ಕಟ್ಟಡವಲ್ಲ. ಸಂಸ್ಕಾರದ ಕೇಂದ್ರಗಳು. ಭಕ್ತಿ ಸಂಸ್ಕೃತಿ ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣವಾಗಿದೆ. ಇಂದು ಶಿಲಾನ್ಯಾಸ ಮಾಡುತ್ತಿರುವುದು ಕೇವಲ ಶಿಲೆಯ ಮಂದಿರ ಅಡಿಪಾಯವಲ್ಲ. ಧರ್ಮನಿಷ್ಠ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಪೂಜೆ ಆಚರಣೆಗಳ ಜತೆಗೆ ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಮತ್ತು ಪರೋಪಕಾರಗಳಿಗೆ ಆದ್ಯತೆ ದೊರೆಯಬೇಕೆಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಬಸವಲಿಂಗ ಶಿವಾಚಾರ್ಯರು ತಮ್ಮ ಮೂಲ ಮಠದ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲ ಭಕ್ತ ಸಮುದಾಯಕ್ಕೆ ಹರುಷ ತಂದಿದೆ. ಒಂದು ವರುಷದೊಳಗೆ ಮಹಾಂತೇಶ್ವರ ಶಿಲಾಮಂಟಪ ಪೂರ್ಣಗೊಂಡು ಮತ್ತೊಮ್ಮೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತೇವೆ. ಶ್ರೀಗಳವರ ಕ್ರಿಯಾ ಕರ್ತೃತ್ವ ಶಕ್ತಿ ಕಂಡು ಹರ್ಷ ವ್ಯಕ್ತಪಡಿಸಿದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆ ಕೇವಲ ಆಚರಣೆಯಲ್ಲಿ ಉಳಿಯದೇ ಅದರ ಹಿಂದಿರುವ ತತ್ವ ಮತ್ತು ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ ವಿದ್ಯಾದಾನ ಆರೋಗ್ಯ ಸೇವೆ ಪರಿಸರ ಸಂರಕ್ಷಣೆ ಮೊದಲಾದ ಸೇವಾ ಕಾರ್ಯಗಳಿಗೆ ಶಿಲಾ ಮಂಟಪ ಪ್ರೇರಣಾ ಕೇಂದ್ರವಾಗಬೇಕೆಂದು ಆಶಿಸಿದರು.
ದೇವರಹಿಪ್ಪರಗಿ, ಗಿರಿಸಾಗರ, ಆಲಮೇಲ, ಮುತ್ತತ್ತಿ, ದೇವೂರು, ಮುಖೇಡ, ಕೆಂಭಾವಿ, ಗುಂಡಕನಾಳ, ಕೊಕಟನೂರು, ಸಿಂದಗಿ, ಯಂಕಂಚಿ, ಬರ್ದಾಪುರ, ದೇವಣಿ, ಮಠಾಧೀಶರು ಉಪಸ್ಥಿತರಿದ್ದರು. ಡಾ.ನಿಂಗನಗೌಡ ರಾಜಶೇಖರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬ.ನಾಲವಾದಗಿ ಬಸನಗೌಡ ಎಸ್. ಪಾಟೀಲ ಮಹಾಪ್ರಸಾದ ಸೇವೆ ಸಲ್ಲಿಸಿದರು. ಯಶವಂತ ಬಡಿಗೇರ ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಜೇರಟಗಿ ಮಡಿವಾಳೇಶ್ವರ ಶಾಸ್ತ್ರಿಗಳು ನಿರೂಪಿಸಿದರು.