ಹಾವೇರಿ: ನೆಲ, ಜಲ, ಸಂಸ್ಕೃತಿಯ ವೈಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ರಾಜ್ಯ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮಗಳ ನೆಲೆವೀಡು. ಇಲ್ಲಿಯ ಭಾಷೆ, ನಾಡು ನುಡಿಯ ಅಭಿವೃದ್ಧಿಗಾಗಿ ರಾಜಿರಹಿತ ಹೋರಾಟ ಮಾಡಿಕೊಂಡು ಬರಲಾಗಿದೆ. ನಿರಂತರ ಈ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ. ಸಮೃದ್ಧ ಮತ್ತು ಸ್ವಾಭಿಮಾನಿ ಕನ್ನಡ ನಾಡು ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಹೇಳಿದರು.ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಮಹೋನ್ನತ ಕೊಡುಗೆ ನೀಡಿದೆ. ಕನ್ನಡ ನಾಡು ಹಾಗೂ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೂ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ.
ಕರ್ನಾಟಕ ಸಾಮಾಜಿಕ ಹರಿಕಾರರಾದ ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‌ವರೆಗೆ ದೇಶಿ ಅಸ್ಮಿತೆಯೊಂದಿಗೆ ನಾಡಿನ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆ ಜೊತೆಗೆ ಎಳೆಯಲಾಗಿದೆ. ಈ ಪರಂಪರೆಯನ್ನು ಮುಂದುವರಿಸುತ್ತ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ನಾಡು-ನುಡಿಯ ಅಭಿವೃದ್ಧಿ ಜೊತೆಗೆ ಜನರ ಬದುಕಿನಲ್ಲಿ ಬದಲಾವಣೆ ತರಲು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 31.8 ಲಕ್ಷ ಫಲಾನುಭವಿಗಳು ಸಂಚಾರ ಮಾಡಿದ್ದು, ಹೆಚ್ಚುವರಿಯಾಗಿ ರು.20 ಕೋಟಿ ಆದಾಯ ನಿಗಮಕ್ಕೆ ಸಂದಿದೆ. ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹಾವೇರಿ ವಿಭಾಗಕ್ಕೆ 86 ನೂತನ ಬಸ್‌ಗಳನ್ನು ನೀಡಲಾಗಿದೆ.ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ.98ರಷ್ಟು ಅಂದರೆ 4.10 ಲಕ್ಷ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಡಿ ಜಿಲ್ಲೆಯ 3.81 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 2 ಸಾವಿರ ರು.ದಂತೆ 2025ರ ಜುಲೈವರೆಗೆ 1553 ಕೋಟಿ ರು. ಪಾವತಿಸಲಾಗಿದೆ ಎಂದು ತಿಳಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದ 30 ಜನ ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಿಂದ ಚಂದ್ರಗೌಡ ಪಾಟೀಲ, ಸುರೇಶ ಮಲ್ಲಾಡದ, ಶೈಲಜಾ ಕೋರಿಶೆಟ್ಟರ, ಸುಭಾಸ ಹೊಸಮನಿ, ಷಣ್ಮುಕಪ್ಪ ಕಂಬಳಿ, ಶಿಕ್ಷಣ ಕ್ಷೇತ್ರದಿಂದ ಮಂಜುಳಾ ಸಂಶಿ, ಕರಕುಶಲ ಕ್ಷೇತ್ರದಿಂದ ಗಣೇಶ ರಾಯ್ಕರ್, ಚಿತ್ರಕಲೆ ಕ್ಷೇತ್ರದಿಂದ ಗಂಗಾಧರ ಹಿರೇಮಠ, ಜಾನಪದ ಸಂಗೀತ ಕಲಾವಿ ಬಸವರಾಜ ಗೊಬ್ಬಿ, ಪುರವಂತಿಕೆ ಕಲಾವಿದ ಓಂಪ್ರಕಾಶ ಅಂಗಡಿ, ವೀರಗಾಸೆ ಕಲಾವಿದ ಶಿವರುದ್ರಪ್ಪ ಬಡಿಗೇರ, ಜಾನಪದ ಕಲಾವಿದರಾದ ರಾಜಕುಮಾರ ಅರ್ಕಸಾಲಿ, ಡಾ. ಆನಂದಪ್ಪ ಜೋಗಿ, ಕೃಷ್ಣಗೌಡ ಜೀವನಗೌಡ್ರ, ಷಣ್ಮುಖಪ್ಪ ಭಜಂತ್ರಿ, ಮಧುಕುಮಾರ ಹರಿಜನ, ರಂಗಭೂಮಿ ಕಲಾವಿದರಾದ ಬೀರಪ್ಪ ಡೊಳ್ಳಿನ, ಕೃಷ್ಣಚಾರಿ ಬಡಿಗೇರ, ಪ್ರಕಾಶ ಗಡಿಯಪ್ಪಗೌಡ್ರ, ಸಮಾಜ ಸೇವೆ ಕ್ಷೇತ್ರದಿಂದ ಐಶ್ವರ್ಯ ಮಾನೇಗಾರ, ಶಿವಪ್ಪ ಮಲಗುಂದ, ಡಾ.ಎಂ.ಎಸ್. ಹೆಬ್ಬಾಳ, ಸಂಗೀತ, ನೃತ್ಯ ಕಲಾವಿದೆ ಮಾನಸಾ ಎಸ್.ಎಚ್., ಸಂಗೀತ ಕಲಾವಿದೆ ಶೀಲಾ ಪಾಟೀಲ, ಕೃಷಿ ಕ್ಷೇತ್ರದಿಂದ ಭೀಮಣ್ಣ ಚಿಗರಿ, ನಾಗೇಂದ್ರ ಮಲಗುಂದ, ವಿಜ್ಞಾನ ಕ್ಷೇತ್ರದಿಂದ ಸಾಗರ ಬಳ್ಳಾರಿ, ಕಿಶೋರ ಬಡಿಗೇರ, ಕನ್ನಡಪರ ಹೋರಾಟಗಾರ ರಮೇಶ ಆನವಟ್ಟಿ ಹಾಗೂ ಸಾಹಿತಿ ಸುಲಕ್ಷಣಾ ಶಿವಪೂರ ಅವರನ್ನು ಸನ್ಮಾನಿಸಲಾಯಿತು.ಆಕರ್ಷಕ ನೃತ್ಯ ಪ್ರದರ್ಶನ: ನಗರದ ಎಸ್.ಎಂ.ಎಸ್., ಹುಕ್ಕೇರಿಮಠ ಹಾಗೂ ಸಾಯಿಚಂದ ಗುರುಕುಲ ಶಾಲೆಗಳ ವಿದ್ಯಾರ್ಥಿಗಳು ನಾಡು-ನುಡಿ ಶ್ರೀಮಂತಿಕೆ ಬಿಂಬಿಸುವ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.ಪೊಲೀಸ್ ಇಲಾಖೆ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ನಾಗರಿಕ ಪೊಲೀಸ್, ಸಶಸ್ತ್ರ ಮೀಸಲು ಪಡೆ, ಅಬಕಾರಿ ದಳ, ಅಗ್ನಿಶಾಮಕ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಅಬಕಾರಿ ಇಲಾಖೆ ಪಡೆ, ಎನ್.ಸಿ.ಸಿ ತಂಡ, ಕೆ.ಎಸ್.ಇ ಆಂಗ್ಲಮಾಧ್ಯಮ, ಜೆಪಿ ರೋಟರಿ, ಕಳಿದಾಸ, ಆದರ್ಶ, ಲೋಡಲ್, ಬಸವ ಭಾರತಿ ಹಾಗೂ ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 15 ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರಗಿತು. ಪೊಲೀಸ್ ವಾದ್ಯವೃಂದ ಸುಸ್ರಾವ್ಯವಾಗಿ ಬ್ಯಾಂಡ್‌ಸೆಟ್ ನುಡಿಸಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಂ.ಎಂ.ಮೈದೂರು, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ, ಜಿ.ಪಂ.ಉಪಕಾರ್ಯದರ್ಶಿ ಡಾ.ಪುನಿತ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.