ಜಿಲ್ಲೆಯನ್ನು ರಫ್ತು ಆಧರಿತ ಅಗ್ರಿಟೆಕ್ ಹಬ್ ಆಗಿಸೋಣ: ಸಂಜಯ್ ಆಲಮೇಲಕರ್

KannadaprabhaNewsNetwork |  
Published : Aug 16, 2026, 03:30 AM IST
ಕಾರ್ಯಕ್ರಮದಲ್ಲಿ ಸಂಜಯ್ ಆಲಮೇಲಕರ್ ಮಾತನಾಡಿದರು. | Kannada Prabha

ಸಾರಾಂಶ

ಗುಜರಾತ್, ಆಂಧ್ರ ಸೇರಿದಂತೆ ಹೊರ ರಾಜ್ಯಗಳ ಹೂಡಿಕೆದಾರರನ್ನು ಗದಗಕ್ಕೆ ಕರೆತಂದು ಕಚ್ಚಾ ವಸ್ತು, ತಂತ್ರಜ್ಞಾನ ಮತ್ತು ಸಂಪೂರ್ಣ ಸಹಕಾರ ನೀಡಲು ಸಿದ್ಧ. ಜೆಎಸ್‌ಡಬ್ಲ್ಯು ವತಿಯಿಂದ ತಾಂತ್ರಿಕ, ಮೆಟೀರಿಯಲ್ ಮತ್ತು ಮಾರುಕಟ್ಟೆ ನೆರವು ನೀಡಲಾಗುವುದು.

ಗದಗ: ಗದಗದ ನಿಜವಾದ ಸಂಪತ್ತು ಇಲ್ಲಿನ ಜನರೇ. ಜಿಲ್ಲೆ ಬೆಳವಣಿಗೆಗೆ ಸಂಪೂರ್ಣ ಸಿದ್ಧವಿದೆ. ಅದನ್ನು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸದೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ವಿಜಯನಗರದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಉಪಾಧ್ಯಕ್ಷ ಸಂಜಯ್ ಆಲಮೇಲಕರ್ ಹೇಳಿದರು.

ನಗರದ ಎಪಿಎಂಸಿ ಯಾರ್ಡ ಸ್ವಾಮಿ ವಿವೇಕಾನಂದ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಪಂ ಆಶ್ರಯದಲ್ಲಿ ನಡೆದ ಗದಗ ಉತ್ಸವ- 2026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಗುಜರಾತ್, ಆಂಧ್ರ ಸೇರಿದಂತೆ ಹೊರ ರಾಜ್ಯಗಳ ಹೂಡಿಕೆದಾರರನ್ನು ಗದಗಕ್ಕೆ ಕರೆತಂದು ಕಚ್ಚಾ ವಸ್ತು, ತಂತ್ರಜ್ಞಾನ ಮತ್ತು ಸಂಪೂರ್ಣ ಸಹಕಾರ ನೀಡಲು ಸಿದ್ಧ. ಜೆಎಸ್‌ಡಬ್ಲ್ಯು ವತಿಯಿಂದ ತಾಂತ್ರಿಕ, ಮೆಟೀರಿಯಲ್ ಮತ್ತು ಮಾರುಕಟ್ಟೆ ನೆರವು ನೀಡಲಾಗುವುದು. ಒಂದು ಕಾಲದಲ್ಲಿ ಹತ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಗದಗ ಭಾಗದಲ್ಲಿ ಅದನ್ನು ಪುನರುಜ್ಜೀವನಗೊಳಿಸಬೇಕು.

ರೈಲ್ವೆ ಬೋಗಿಗಳ ಬಿಡಿಭಾಗಗಳನ್ನು ಪಶ್ಚಿಮ ಬಂಗಾಳದಿಂದ ತರಿಸುವ ಬದಲು ಸ್ಥಳೀಯವಾಗಿಯೇ ಉತ್ಪಾದಿಸಲು ಅಪಾರ ಅವಕಾಶವಿದೆ. ಈ ಕುರಿತು ನೈಋತ್ಯ ರೈಲ್ವೆ ಜಿಎಂ ಜತೆ ಚರ್ಚೆ ನಡೆದಿದೆ. ಕೃಷಿಯನ್ನು ಅಗ್ರಿಟೆಕ್ ಇಂಡಸ್ಟ್ರಿಯಾಗಿ ಪರಿವರ್ತಿಸಬೇಕು. ಫುಡ್ ಪ್ರೊಸೆಸಿಂಗ್, ಮಸಾಲೆ ಪದಾರ್ಥಗಳ ಮೌಲ್ಯವರ್ಧನೆಗೆ ದೊಡ್ಡ ಅವಕಾಶವಿದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿ ಜಿಲ್ಲೆಗೂ ಒಂದು ಉತ್ಪನ್ನ ಮಾದರಿಯನ್ನು ಗದಗದಲ್ಲಿ ಜಾರಿಗೆ ತರಬೇಕು ಎಂದರು.

ಮೈಂಡ್‌ಸೆಟ್ ಕೋಚ್, ಕಾರ್ಪೋರೇಟ್ ಟ್ರೇನರ್ ಮಹೇಶ ಮಾಶ್ಯಾಳ ಮಾತನಾಡಿ, 2030- 32ರ ವೇಳೆಗೆ ಜಗತ್ತು ಸಂಪೂರ್ಣ ಬದಲಾಗಲಿದೆ. ಎಐ ಮೂಲಕ ಸತ್ತವರೂ ಮಾತನಾಡುವ ಕಾಲ ಬರಲಿದೆ. ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಉದ್ಯಮಗಳು ಮುಚ್ಚುತ್ತವೆ. ಜಾಗ್ರತರಾಗಿ ಎಂದರು.

ಆಝಾದ್ ಬ್ಯಾಂಕ್ ಚೇರಮನ್ ಸರ್ಫರಾಜ ಉಮಚಗಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ಉತ್ಸವ ಸಮಿತಿಯ ಚೇರಮನ್ ಮಧುಸೂದನ ಪುಣೇಕರ ಮಾತನಾಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಬಬರ್ಚಿ ಸೇರಿದಂತೆ ಚೇಂಬರ್ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು. ಕ್ಷಿತಿ ಅಶ್ವಥ್ ಸುಲಾಖೆ ಪ್ರಾರ್ಥಿಸಿದರು. ಶಿವಬಸಯ್ಯ ಗಡ್ಡದಮಠ ಸಂಗಡಿಗರಿಂದ ಸಂಗೀತ ಜರುಗಿತು. ಚಂದ್ರು ಬಾಳಿಹಳ್ಳಿಮಠ ಹಾಗೂ ಮುರುಗೇಶ ಬಡ್ನಿ ನಿರೂಪಿಸಿದರು. ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶಿಕಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಪ್ರಾಧಿಕಾರದಲ್ಲಿ ಕೋಟಿ ಕೋಟಿ ಲೂಟಿ!
ಜಿಲ್ಲೆಯಲ್ಲಿ 215 ಭಾರತ ಜೋಡೋ ಯುವ ಸಂಘ ಸ್ಥಾಪನೆ