ಶರಣರಿಗೆ ಜಾತಿ ಸೂತ್ರ ತೊಡಿಸುವುದು ಬೇಡ: ಮಾರುತಿ ಶಿಡ್ಲಾಪೂರ

KannadaprabhaNewsNetwork |  
Published : Oct 18, 2026, 03:00 AM IST
೮೯ನೇ ನಾಡಹಬ್ಬದ ಸಾಹಿತ್ಯ ಗೋಷ್ಠಿಯಲ್ಲಿ ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಾರುತಿ ಶಿಡ್ಲಾಪೂರ, ಬಿಎಸ್.ಅಕ್ಕಿವಳ್ಳಿ, ಷಣ್ಮುಖಪ್ಪ ಮುಚ್ಚಂಡಿ, ನಾಗಪ್ಪ ಸವದತ್ತಿ ಇದ್ದರು. | Kannada Prabha

ಸಾರಾಂಶ

೮೯ನೇ ನಾಡಹಬ್ಬದ ಸಾಹಿತ್ಯ ಗೋಷ್ಠಿಯಲ್ಲಿ ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಾರುತಿ ಶಿಡ್ಲಾಪೂರ, ಬಿಎಸ್.ಅಕ್ಕಿವಳ್ಳಿ, ಷಣ್ಮುಖಪ್ಪ ಮುಚ್ಚಂಡಿ, ನಾಗಪ್ಪ ಸವದತ್ತಿ ಇದ್ದರು.

ಹಾನಗಲ್ಲ: ಜಾತಿ ಸೂತಕದಿಂದ ಹೊರಬಂದ ಶರಣರಿಗೆ ಮತ್ತೆ ಜಾತಿ ಸೂತ್ರವನ್ನೆ ತೊಡಿಸುವ ಯತ್ನಗಳು ವಿಷಾದನೀಯವಾದರೂ, ಶರಣರ ತತ್ವ ಸಂದೇಶಗಳು ಮಾತ್ರ ಕಾಲಾತೀತ, ಜಾತ್ಯತೀತ, ಸಾರ್ವಕಾಲಿಕ ಸತ್ಯ ಎಂಬ ತಥ್ಯೆವನ್ನು ಮರೆಮಾಚಲಾಗದು ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲಿನ ೮೯ನೇ ನಾಡಹಬ್ಬದ ೬ನೇ ದಿನದ ಧರ್ಮ ಸಭೆಯ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ನಾಡ ಹಬ್ಬ ಎಲ್ಲರೂ ಒಂದಾಗಿ ನಾಳೆಗಳಿಗೆ ನಮ್ಮ ಪ್ರೀತಿ ಸ್ನೇಹಗಳನ್ನು ನವೀಕರಿಸಿಕೊಳ್ಳುವ ಸಂಭ್ರಮ. ಕಾಲ ಬದಲಾಗಿದೆ ಎಂದು ಹೇಳುತ್ತಲೇ ಮನುಷ್ಯನೇ ಬದಲಾಗಿ ಕಾಲವನ್ನು ದೂರುವ ಕಾಲದಲ್ಲಿದ್ದೇವೆ. ಶರಣರು, ದಾಸರು, ಸಂತರು ಸಮಾಜದ ಕೊಳೆ ಕಳೆದು ಒಳಿತನ್ನು ಬಿತ್ತಿ ಬೆಳೆದರೂ ಕೂಡ ಮತ್ತೆ ಮತ್ತೆ ಕಳೆಯೇ ವಿಜೃಂಭಿಸುವ ಕಾಲದಲ್ಲಿದ್ದೇವೆ. ನ್ಯಾಯ, ನೀತಿ ಮೌಲ್ಯಗಳು ಶಾಲಾ ಪಠ್ಯ ವೇದಿಕೆಯ ಭಾಷಣದ ವಸ್ತುಗಳಾಗಿವೆ. ಅಧಿಕಾರ ಆಮಿಷೆಗಳೇ ಜನರನ್ನು ಆಳುತ್ತಿವೆ. ಕಾಯಕ ನಿಷ್ಠೆಯ ಶರಣರು ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು ಎಂದು ಅರುಹಿದ್ದಾರೆ. ಆರ್ಥಿಕ ತಜ್ಞನಾಗಿ, ದಲಿತೋದ್ಧಾರಕನಾಗಿ, ವೈಚಾರಿಕ ಚಿಂತಕನಾಗಿದ್ದ ಬಸವಣ್ಣನ ತ್ಯಾಗ ಜೀವನ ಜಗತ್ತಿಗೆ ದೊಡ್ಡ ಮಾದರಿ ಸಂದೇಶ. ದಯೆ, ದಾಸೋಹ ನಮ್ಮ ಸಂಸ್ಕೃತಿಯ ಹಿರಿಮೆ. ಅತ್ಯಂತ ಸರಳ ವಚನಗಳು ನಮ್ಮ ಮನೆಮನೆಯ ಮಾತಾಗಬೇಕಾಗಿದೆ ಎಂದರು.

ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿ, ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಸಮಾರಂಭಗಳು ನಿರಂತರವಾಗಿರಬೇಕು. ಕಲೆ ಸಂಸ್ಕೃತಿ ಇರುವಲ್ಲಿ ಉತ್ತಮ ಸಮಾಜ ಇರಲು ಸಾಧ್ಯ. ಸಾಹಿತ್ಯಾಭಿರುಚಿ ಬೇಕು. ಜಗತ್ತಿಗೆ ಮಾದರಿ ಸಂಸ್ಕೃತಿ ಸಂದೇಶಗಳನ್ನು ನೀಡಿದ ಭಾರತ ಇಂದಿಗೂ ಜಗತ್ತೇ ಮೆಚ್ಚುವ ಸಂಸ್ಕೃತಿಯ ನಾಡಾಗಿದೆ. ದ್ವೇಷ ಅಸೂಹೆಗಳನ್ನು ದೂರವಿಟ್ಟು ಪ್ರೀತಿ, ಸ್ನೇಹಗಳು ನಮ್ಮ ಉಸಿರಾಗಲಿ. ನಾಳೆಯ ನಮ್ಮ ಪೀಳಿಗೆಗೆ ಒಳ್ಳೆಯದನ್ನು ಕಟ್ಟಿಕೊಡೋಣ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಹಾನಗಲ್ಲ ನಾಡಹಬ್ಬ ಇದು ರಾಜ್ಯದಲ್ಲಿಯೇ ಮಾದರಿಯಾದುದು. ಸಾಹಿತಿ ಸಂತ ಮಹಂತರು ಈ ನಾಡಹಬ್ಬದಲ್ಲಿ ಪಾಲ್ಗೊಂಡುದು ನಮ್ಮ ಹಾನಗಲ್ಲಿನ ಹೆಮ್ಮೆ. ಒಂದು ವೈಚಾರಿಕ ಮಂಥನಕ್ಕೆ ವೇದಿಕೆಯಾಗಿರುವ ಹಾನಗಲ್ಲ ನಾಡಹಬ್ಬ ಶತಮಾನದ ಹತ್ತಿರವಿರುವುದು ಇಲ್ಲಿನ ಇತಿಹಾಸ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ವೇದಿಕೆಯಲ್ಲಿದ್ದರು. ಸಾಯಿ ಸೇವಾ ಸಮಿತಿ ಸದಸ್ಯರು ಪ್ರಾರ್ಥನೆ ಹಾಡಿದರು. ಕಲಾವಿದ ಜಗದೀಶ ಮಡಿವಾಳರ ಹಾಗೂ ತಂಡದ ಕಲಾವಿದರು ಕನ್ನಡ ಗೀತ ಗಾಯನ ಮಾಡಿದರು. ಸಿಂಚನಾ ಲಿಂಗೇರಿ, ಅನನ್ಯಾ ಹೆಬ್ಬಾರ, ಜಿ.ಎನ್. ಮೇಲಿನಮನಿ ಕನ್ನಡ ಭಾವಗೀತೆಗಳನ್ನು ಹಾಡಿದರು. ಗಿರೀಶ ದೇಶಪಾಂಡೆ ಸ್ವಾಗತಿಸಿದರು. ದಾನೇಶ್ವರಿ ಶಾಂತಪೂರಮಠ ಕಾರ್ಯಕ್ರಮ ನಿರೂಪಿಸಿದರು. ಮಮತಾ ಆರೆಗೊಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ರೋಣ, ಸವಡಿಯಲ್ಲಿ ಸಂಕನೂರ ಪರ ಕಳಕಪ್ಪ ಬಂಡಿ ಮತಯಾಚನೆ
ಬ್ಯಾಡಗಿ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನ