ಇದು ಕೇವಲ ಮನರಂಜನೆಯ ಕಲೆಯಲ್ಲ. ಸಾಹಿತ್ಯ ಹಾಗೂ ಮೌಲ್ಯಗಳ ಸಮನ್ವಯ ಹೊಂದಿರುವ ಈ ಕಲಾಪ್ರಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.
ಶಿರಸಿ: ಯಕ್ಷಗಾನ ಕಲೆಯ ಉಳಿವು ಹಾಗೂ ಅದರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತಾಳಮದ್ದಳೆ ಸೇರಿದಂತೆ ಯಕ್ಷಗಾನ ಕಲಾ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಹೇಳಿದರು.ನಗರದ ಟಿಎಂಎಸ್ ಸಭಾಭವನದಲ್ಲಿ ಸೋಮವಾರದಿಂದ ಆರಂಭಗೊಂಡ ಯಕ್ಷಸಂಭ್ರಮ ಟ್ರಸ್ಟ್‌ನ ಐದು ದಿನಗಳ ಪಂಚವಲ್ಲರೀ 12ನೇ ವರ್ಷದ ತಾಳಮದ್ದಳೆ ಸರಣಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದು ಕೇವಲ ಮನರಂಜನೆಯ ಕಲೆಯಲ್ಲ. ಸಾಹಿತ್ಯ ಹಾಗೂ ಮೌಲ್ಯಗಳ ಸಮನ್ವಯ ಹೊಂದಿರುವ ಈ ಕಲಾಪ್ರಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಳೆದ ಹನ್ನೆರಡು ವರ್ಷಗಳಿಂದ ಯಕ್ಷಸಂಭ್ರಮ ಟ್ರಸ್ಟ್ ನಿರಂತರವಾಗಿ ತಾಳಮದ್ದಳೆ ಕಾರ್ಯಕ್ರಮಗಳನ್ನು ಹಬ್ಬದ ಮಾದರಿಯಲ್ಲಿ ಆಯೋಜಿಸುವ ಮೂಲಕ ಕಲೆಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಿದೆ. ಇಂತಹ ಪ್ರಯತ್ನಗಳಿಗೆ ಕಲಾಭಿಮಾನಿಗಳು ಹಾಗೂ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷ ಸಂಭ್ರಮ ಟ್ರಸ್ಟ್‌ನ ಪ್ರಮುಖರಾದ ಸೀತಾರಾಮ ಚಂದು, ಸೋಮವಾರದಿಂದ ಅ. 9ರ ವರೆಗೆ ಪ್ರತಿದಿನ ಸಂಜೆ 4 ಗಂಟೆಗೆ ನಡೆಯಲಿರುವ ಸರಣಿಗೆ ಯಕ್ಷಗಾನ ಹಾಗೂ ತಾಳಮದ್ದಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. 9ರಂದು ಚಂದುಬಾಬು ಪ್ರಶಸ್ತಿ ಕೂಡ ಪ್ರದಾನ ಆಗಲಿದೆ ಎಂದರು.ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಸರಣಿಗೆ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಹೆಗಡೆ ವಂದಿಸಿದರು. ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರವಿಚಂದ್ರ ಕನ್ನಡಿಗಟ್ಟೆ, ಮೃದಂಗದಲ್ಲಿ ಶಂಕರ ಭಾಗವತ ಯಲ್ಲಾಪುರ ಹಾಗೂ ಚೈತನ್ಯ ಪದ್ಯಾಣ, ಚೆಂಡೆಯಲ್ಲಿ ಭಾರ್ಗವ ಹೆಗ್ಗೋಡು ಪಾಲ್ಗೊಂಡಿದ್ದರು. ಅರ್ಥಧಾರಿಗಳಾಗಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಾಸುದೇವರಂಗ ಭಟ್ಟ, ಡಾ. ಗಣಪತಿ ಭಟ್ಟ ಸಂಕದಗುಂಡಿ, ಹರೀಶ್ ಬೊಳಂತಿಮೊಗರು, ಪವನ್ ಕಿರಣಕೆರೆ, ಆರ್.ಟಿ. ಭಟ್ಟ ಕಬ್ಬಗಾಲ್ ಹಾಗೂ ಗಣೇಶ್ ಶೆಟ್ಟಿ ಕನ್ನಡಿಗಟ್ಟೆ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.