ನದಿ ಉಳಿವಿನ ಹೋರಾಟ ಕೇವಲ ಎರಡು- ಮೂರು ತಾಲೂಕುಗಳಿಗೆ ಸೀಮಿತವಾಗಬಾರದು. ಇಡೀ ಜಿಲ್ಲೆಯ ಜನ ಭಾಗವಹಿಸುವಂತಾಗಬೇಕು.
ಯಲ್ಲಾಪುರ: ವರದಾ ಬೇಡ್ತಿ ನದಿ ಜೋಡಣೆ ಯೋಜನೆ ವಿರೋಧಿಸಿ ನ. 3ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಬೃಹತ್ ರಸ್ತಾ ರೋಖೋ ಸಿದ್ಧತೆಗಾಗಿ ರಸ್ತೆತಡೆ ಸಂಚಾಲನಾ ಸಮಿತಿಯ ಪೂರ್ವಭಾವಿ ಸಭೆ ಟಿಎಂಎಸ್ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನದಿ ಉಳಿವಿನ ಹೋರಾಟ ಕೇವಲ ಎರಡು- ಮೂರು ತಾಲೂಕುಗಳಿಗೆ ಸೀಮಿತವಾಗಬಾರದು. ಇಡೀ ಜಿಲ್ಲೆಯ ಜನ ಭಾಗವಹಿಸುವಂತಾಗಬೇಕು. ಜಾತಿ, ಮತ, ಪಕ್ಷಭೇದ ಮರೆತು ಜಿಲ್ಲೆಯ ಉಳಿವಿಗಾಗಿ ಜಿಲ್ಲೆಯ ಜನರು ಒಂದಾಗಬೇಕು. ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಾಗಬೇಕು ಎಂದರು. ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನದಿ ಜೋಡಣೆಯಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ನದಿ ಉಳಿವಿಗಾಗಿ ಜನರು ಸ್ವಯಂಪ್ರೇರಿತರಾಗಿ ಹೋರಾಟದಲ್ಲಿ ಭಾಗವಹಿಸುವಂತಾಗಬೇಕು. ಜನಪ್ರತಿನಿಧಿಗಳು ಬಂದು ಪೊಳ್ಳು ಭರವಸೆ ನೀಡಿದರೆ ಸಾಲದು. ಅವರು ಯೋಜನೆಯನ್ನು ತಡೆಯುವ ವಿಚಾರದಲ್ಲಿ ಬದ್ಧತೆಯಿಂದ ವರ್ತಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಬಂದು ನಮ್ಮ ಹೋರಾಟಕ್ಕೆ ಸ್ಪಂದಿಸುವವರೆಗೆ ರಸ್ತೆ ತಡೆ ಮುಂದುವರಿಯಲಿದೆ. ಈ ಹೋರಾಟದ ಮೂಲಕ ಸರ್ಕಾರಕ್ಕೆ ಪಕ್ಷಾತೀತವಾಗಿ ಒಗ್ಗಟ್ಟಿನ ಸ್ಪಷ್ಟ ಸಂದೇಶ ತಲುಪಿಸಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ಹೋರಾಟದ ಬಗ್ಗೆ ಮಾಹಿತಿ ತಲುಪಿಸಿ, ರಸ್ತೆ ತಡೆಯಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಜನ ಸಂಪರ್ಕಕ್ಕಾಗಿ ತಾಲೂಕಿನ 15 ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿ, ಅಂಕೋಲಾ ತಾಲೂಕಿನ ಡೋಂಗ್ರಿ, ಸುಂಕಸಾಳ ಪಂಚಾಯಿತಿ ಮಟ್ಟದ ಪ್ರಮುಖರ ಸಮಿತಿಯನ್ನು ರಚಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಯಿತು.ರಸ್ತೆ ತಡೆ ಹೋರಾಟಕ್ಕೆ ಅಗತ್ಯವಾದ ಖರ್ಚು ವೆಚ್ಚಗಳನ್ನು ಹೊಂದಿಸಲು ಆರ್ಥಿಕ ಸಮಿತಿ ರಚಿಸಲಾಯಿತು. ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು.ಸಮಿತಿಯ ಪ್ರಮುಖರಾದ ರಾಘವೇಂದ್ರ ಭಟ್ಟ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ನರಸಿಂಹ ಸಾತೊಡ್ಡಿ, ರವಿ ಹೆಗಡೆ, ಶ್ರೀರಾಮ ಲಾಲಗುಳಿ, ನಾರಾಯಣ ಸುರ್ಗಿಮನೆ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ವಿ.ಟಿ. ಹೆಗಡೆ, ಕೆ.ಟಿ. ಹೆಗಡೆ, ಎಂ.ಕೆ. ಭಟ್ಟ ಯಡಳ್ಳಿ, ಎಂ.ಆರ್. ಹೆಗಡೆ ತಾರೆಹಳ್ಳಿ, ಭಾಸ್ಕರ ಸಿದ್ದಿ, ಮಹೇಶ ಕುಣಬಿ, ಸಂತೋಷ ಭಟ್ಟ ಹಳವಳ್ಳಿ, ವಿನೋದ ಭಟ್ಟ, ರಘುಪತಿ ಹೆಗಡೆ, ಸುಬ್ಬಣ್ಣ ಉದ್ದಾಬೈಲ, ಎನ್.ಜಿ. ಹೆಗಡೆ ಭಟ್ರಕೇರಿ, ನಾರಾಯಣ ಭಟ್ಟ ಶಿರವಳ್ಳಿ, ಪುರಂದರ ನಾಯ್ಕ ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.