ಹೊಸಪೇಟೆ: ದೇಶದ ಏಕತೆ, ಸಮಗ್ರತೆ ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡಿಕೊಂಡು ಮುನ್ನಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ಯುವ ಕರ್ನಾಟಕ, ನವಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್, ಸರೋಜಿನಿ ನಾಯ್ಡು ಸೇರಿದಂತೆ ಅಸಂಖ್ಯಾತ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಆದರ್ಶಗಳನ್ನು ಸ್ಮರಿಸಿದ ಅವರು, ಕರ್ನಾಟಕದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹಿಳಾ ಹೋರಾಟಗಾರರ ಕೊಡುಗೆಯನ್ನೂ ಅವರು ಸ್ಮರಿಸಿದರು.
ಸ್ವಾತಂತ್ರ‍್ಯಾ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಎಲ್ಲರನ್ನು ಒಳಗೊಂಡ ನವಭಾರತ ನಿರ್ಮಾಣಕ್ಕೆ ನಾಂದಿ ಹಾಡಿದೆ. ಪ್ರತಿಯೊಬ್ಬ ನಾಗರಿಕನೂ ಘನತೆ, ಸ್ವಾಭಿಮಾನ ಹಾಗೂ ಸಭ್ಯತೆಯ ಜೀವನ ನಡೆಸಲು ಸಂವಿಧಾನ ಸಹಕಾರಿಯಾಗಿದೆ ಎಂದರು.ಸ್ವಾತಂತ್ರ‍್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಹಾಗೂ ಗಮನಾರ್ಹ ಸೇವೆ ಸಲ್ಲಿಸಿದ ಡಾ. ಮಂಜುನಾಥ, ಸೋಮಶೇಖರ್, ಶ್ರುತಿ, ವಿರೂಪಾಕ್ಷಪ್ಪ, ಬಿ.ಎಂ. ಲೋಕೇಶ್ ಬಾಬು, ಎಂ. ಜಿಲಾನ್ ಸಾಹೇಬ್, ವೈ. ಬಸವರಾಜ್ ಹಾಗೂ ಗಂಗಾಧರ ಅವರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಅಬ್ದುಲ್ ಅವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಕಣ್ಮನ ಸೆಳೆದವು.
ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ್ ನಾಯ್ಕ್, ಶಾಸಕ ಎಚ್.ಆರ್. ಗವಿಯಪ್ಪ, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ ಉಪಸ್ಥಿತರಿದ್ದರು.